ರಾಜ್ಯ ಸರ್ಕಾರದಿಂದ ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಪ್ರಕಟ; ಮುಸ್ಲಿಮರ 2ಬಿ ಮೀಸಲಾತಿ ರದ್ದು

ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಸರ್ಕಾರ ಎಸ್ಸಿ ಸಮುದಾಯಕ್ಕೆ ಶುಕ್ರವಾರ ಭರ್ಜರಿ ಗಿಫ್ಟ್ ನೀಡಿದ್ದು, ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಸರ್ಕಾರ ಎಸ್ಸಿ ಸಮುದಾಯಕ್ಕೆ ಶುಕ್ರವಾರ ಭರ್ಜರಿ ಗಿಫ್ಟ್ ನೀಡಿದ್ದು, ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದೆ.

ಇಂದು ವಿಧಾನಸೌಧದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ. ಎಸ್ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿದೆ ಎಂದರು.

ಗುಂಪು ಒಂದರಲ್ಲಿ ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ಗುಂಪು 2 ರಲ್ಲಿ ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3ರಲ್ಲಿ ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

2ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಆರ್ಥಿಕವಾಗಿ ಹಿಂದೂಳಿದ ವರ್ಗದ(EWS) ಅಡಿಯಲ್ಲಿ ಮೀಸಲಾತಿ ನೀಡಲಾಗುವುದು. ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇನ್ನು 2 ಸಿ ಅಡಿ ಒಕ್ಕಲಿಗರಿಗೆ ಶೇಕಡಾ 6 ರಷ್ಟು ಮೀಸಲಾತಿ ಹಾಗೂ 2 ಡಿ ಅಡಿ ಲಿಂಗಾಯತರಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಎರಡು ಬೃಹತ್ ಸಮುದಾಯಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಸರ್ಕಾರ ಮಾಡಿದೆ.

ಚುನಾವಣೆ ಹೊಸ್ತಿಲಲ್ಲಿ ಈಗಾಗಲೇ ವಿವಿಧ ಮೀಸಲಾತಿ ಬೇಡಿಕೆ ಈಡೇರಿಸಿರುವ ಬಿಜೆಪಿ ಸರ್ಕಾರ ದಶಕಗಳ ಒಳಮೀಸಲಾತಿ ಬೇಡಿಕೆ ಈಡೇರಿಸುವ ಮೂಲಕ ಚುನಾವಣಾ ಲಾಭ ಪಡೆಯುವ ಕಾರ್ಯತಂತ್ರ ರೂಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com