ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಡಿಸಿಎಂ ಹುದ್ದೆ ನೀಡಿ: ಮಠಾಧೀಶರ ಒತ್ತಾಯ
ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮತದಾರರು 135 ಸ್ಥಾನಗಳನ್ನು ನೀಡಿ, ಬಹುಮತದ ಸರಕಾರ ರಚನೆಗೆ ಹಾದಿ ಸುಗಮಗೊಳಿಸಿದ್ದಾರೆ. ಗಮನಾರ್ಹ ಅಂಶವೆಂದರೆ, ರಾಜ್ಯದಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಮತದಾರರು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ ಕಾರಣಕ್ಕಾಗಿ 34 ಲಿಂಗಾಯತ ಶಾಸಕರು ಆಯ್ಕೆಗೊಂಡಿದ್ದಾರೆ.
Published: 16th May 2023 09:25 AM | Last Updated: 16th May 2023 09:25 AM | A+A A-

ಈಶ್ವರ್ ಖಂಡ್ರೆ
ಕಲಬುರಗಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರಿಗೆ ಸಚಿವ ಸಂಪುಟ ರಚನೆ ವೇಳೆ ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡಬೇಕು ಎಂದು ಶ್ರೀಶೈಲಂ ಮತ್ತು ಸುಲಫಲ ಮಠದ ಪೀಠಾಧಿಪತಿ ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯರು, ಚವದಾಪುರಿ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು, ಮುಗಳನಾಗಾವಿ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸ್ವಾಮೀಜಿಗಳು, ‘ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮತದಾರರು 135 ಸ್ಥಾನಗಳನ್ನು ನೀಡಿ, ಬಹುಮತದ ಸರಕಾರ ರಚನೆಗೆ ಹಾದಿ ಸುಗಮಗೊಳಿಸಿದ್ದಾರೆ. ಗಮನಾರ್ಹ ಅಂಶವೆಂದರೆ, ರಾಜ್ಯದಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಮತದಾರರು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ ಕಾರಣಕ್ಕಾಗಿ 34 ಲಿಂಗಾಯತ ಶಾಸಕರು ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅಂಧಾಭಿಮಾನದ ಅತಿರೇಕ: ಡಾ. ಸುಧಾಕರ್ ಸೋತಿದ್ದಕ್ಕೆ ಬೆಂಬಲಿಗ ಆತ್ಮಹತ್ಯೆ
ಇಂಥದ್ದೊಂದು ಅಭೂತಪೂರ್ವ ಯಶಸ್ಸಿನ ಹಿಂದೆ ಈಶ್ವರ ಖಂಡ್ರೆಯವರ ಸಂಘಟನಾ ಪರಿಶ್ರಮವನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾಗಿ ಖಂಡ್ರೆಯವರಿಗೆ ಹೊಸದಾಗಿ ರಚನೆ ಆಗಲಿರುವ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು’ ಎಂದಿದ್ದಾರೆ. ‘ಕಲ್ಯಾಣ ಕರ್ನಾಟಕ ಪ್ರದೇಶ ಒಳಗೊಂಡಂತೆ ಇಡೀ ರಾಜ್ಯದಲ್ಲಿ ವೀರಶೈವ–ಲಿಂಗಾಯತ ಸಮುದಾಯದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ 16 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿದ್ದರು.
ಈಶ್ವರ ಖಂಡ್ರೆ ಅವರು ವೀರಶೈವ-ಲಿಂಗಾಯತ ಸಮುದಾಯದ ಜನಪ್ರಿಯ ನಾಯಕರಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ತಳಹದಿ ಬಲವಾಗಿದೆ. ಈಶ್ವರ ಖಂಡ್ರೆ ಅವರು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸದಾ ಅನುಸರಿಸುತ್ತಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.