ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ವೈ ಎಸ್ ವಿ ದತ್ತ: ಕಡೂರಿನಲ್ಲಿ ಪಶ್ಚತ್ತಾಪ ಪಾದಯಾತ್ರೆ!

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್​ನ ವೈಎಸ್​ವಿ ದತ್ತ ಅವರು ಇದೀಗ ಚುನಾವಣಾ ರಾಜಕೀಯದಿಂದ ಹಿಂದೆಸರಿದಿದ್ದಾರೆ.
ವೈಎಸ್ ವಿ ದತ್ತಾ
ವೈಎಸ್ ವಿ ದತ್ತಾ

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್​ನ ವೈಎಸ್​ವಿ ದತ್ತ ಅವರು ಇದೀಗ ಚುನಾವಣಾ ರಾಜಕೀಯದಿಂದ ಹಿಂದೆಸರಿದಿದ್ದಾರೆ.

ಚುನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಿಂದ ಪಶ್ಚಾತ್ತಾಪ ಪಟ್ಟಿರುವ ದತ್ತ ಅವರು, ಇದೀಗ ಕ್ಷೇತ್ರದಲ್ಲಿ ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡು ಜನರಲ್ಲಿ ಕ್ಷಮೆ ಕೋರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ನಿಮ್ಮ ದತ್ತಣ್ಣ ಮಾಡುವ ನಮಸ್ಕಾರಗಳು ಎಂದು ಹೇಳಿ ಸುದೀರ್ಘವಾದ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕ್ಷೇತ್ರದ ನೂತನ ಶಾಸಕರಿಗೆ ಮಂತ್ರಿಯಾಗಲೆಂದು ಶುಭ ಹಾರೈಸಿದರು. ಸದ್ಯ ನಾನೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಎಲ್ಲಿ ಎಡವಿದೆ, ನನ್ನ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ನಾನು ಎಲ್ಲಿ ವಿಫಲನಾಗಿದ್ದೇನೆ ಎಂಬ ಬಗ್ಗೆ ಚಿಂತನ ಮಂಥನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

2023ರ ಚುನಾವಣೆ ನನ್ನ ಪಾಲಿಗೆ ಅವಿಸ್ಮರಣೀಯ ಚುನಾವಣೆ ಅಗಬಹುದೆಂಬ ಅಶಾಭಾವನೆ ಮೂಡಿತ್ತು. ಅದೂ ಅಲ್ಲದೇ ಇದೇ ನನ್ನ ಕಡೆಯ ಚುನಾವಣೆ ಎಂಬುದನ್ನೂ ತಮ್ಮಲ್ಲಿ ತಿಳಿಸಿದ್ದೆ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ನನಗೆ ವಾಸ್ತವ ದರ್ಶನವಾಯಿತು ಎಂದು ತಮ್ಮ ಸೋಲಿನ ಬಗ್ಗೆ ಹೇಳಿಕೊಂಡಿದ್ದಾರೆ.

2006ರಲ್ಲಿ ನಾನು ಕಡೂರು ಕ್ಷೇತ್ರಕ್ಕೆ ಅನಿವಾರ್ಯವಾಗಿ ಬಂದ ದಿನದಿಂದ 2023ರವೆರಗೂ ನನ್ನ ನಡವಳಿಕೆ, ನಿರ್ಧಾರ ಹಾಗು ಮತದಾರನೊಂದಿಗಿನ ಸಂಬಂಧದ ಬಗ್ಗೆ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ಕಾಡತೊಡಗಿದೆ.

ಚುನಾವಣಾ ಫಲಿತಾಂಶದ ಬಗ್ಗೆ ನಾನು ಎಂದು ತಲೆಕೆಡಿಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದ್ದೇನೆ. ಎರಡನ್ನು ಸಮಾನಾವಾಗಿ ಸ್ವೀಕರಿಸುವ ಮನೋಭಾವ ನನದು ಹಾಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎಳ್ಳಷ್ಟು ಬೇಸರವಿಲ್ಲ.

ನಾನೀಗ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಚುನಾವಣೆಯಲ್ಲಿ ನಾನು ಎಲ್ಲಿ ಎಡವಿದೆ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಎಲ್ಲಿ ವಿಫಲನಾಗಿದ್ದೇನೆ ಎಂಬುದರ ಕುರಿತು ಚಿಂತನ-ಮಂಥನ ಮಾಡುತ್ತಿದ್ದೇನೆ.

ಈ ಸೋಲು ನನ್ನ ಉತ್ಸಾಹವನ್ನು ಕಡಿಮೆ ಮಾಡಿಲ್ಲ ಚುನಾವಣಾ ರಾಜಕೀಯದಿಂದ ಹೊರನಡೆಯಲು ತೀರ್ಮಾನಿಸಿದ್ದೇನೆ. ಆದರೆ, ಸಕ್ರಿಯ ರಾಜಕರಾಣದಿಂದ ದುರ ಸರಿಯುವ ಮಾತಿಲ್ಲ.
ಪ್ರಾಯಶ್ಚಿತ ಪಾದಯಾತ್ರೆ

ಕಳೆದ 17 ವರ್ಷಗಳಿಂದ ನೀವು ತೋರಿರುವ ಪ್ರೀತಿ, ಅಭಿಮಾನದ ಕಾರಣಕ್ಕಾಗಿ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರಿರುವವರೆಗೂ ನಿಮ್ಮೊಂದಿಗೆ ಇದ್ದು ಈ ನೆಲದಲ್ಲಿಯೇ ಮಣ್ಣಾಗಬೇಕು ಎಂಬ ದೃಢ ಸಂಕಲ್ಪ ಮಾಡಿರುತ್ತೇನೆ.

ಈ ನಿಟ್ಟಿನಲ್ಲಿ ನಾನೊಂದು ನಿರ್ಧಾರಕ್ಕೆ ಬಂದಿದ್ದು ಜೂನ್​ 24ರಂದು ನನ್ನ 70ನೇ ಜನ್ಮದಿನ. ನನ್ನ ಜನ್ಮದಿನದಂದು ಪಾದಯಾತ್ರೆಯನ್ನು ಆರಂಭಿಸಿ ನಿಮ್ಮ ನಿಮ್ಮ ಊರುಗಳಿಗೆ ಬಂದು ನಾನು ನನ್ನ ತಪ್ಪುಗಳನ್ನು ನಿಮ್ಮ ಬಳಿ ನಿವೇದಿಸಿಕೊಂಡು ನಿಮ್ಮ ಕ್ಷಮೆ ಕೇಳುವ ಸಲುವಾಗಿ ನಾನೇ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.

ಪ್ರಾಯಶ್ಚಿತ ಪಾದಯಾತ್ರೆ ಎಂಬ ಹೆಸರಿನಲ್ಲಿ ನಾನು ನಿಮ್ಮಲ್ಲಿಗೆ ಬರುತ್ತಿದ್ದೇನೆ. ಇದು ಯಾವುದೇ ಚುನಾವಣೆಯ ದೃಷ್ಟಿಯಿಂದಲ್ಲ . ಬದಲಿಗೆ ನಾನೇ ಮಾಡಿರಬಹುದಾದ ಅನೇಕ ತಪ್ಪುಗಳಿಗೆ ನೀವು ನೀಡಿರುವ ಶಿಕ್ಷೆಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಇದು ಸಕಾಲವಾಗಿದ್ದು ಈ ಕ್ರಮಕ್ಕೆ ಮುಂದಾಗಿದ್ದೇನೆ. ಜೂನ್​ ಮೊದಲನೇ ವಾರ ಪಾದಯಾತ್ರೆಯ ಪ್ರವಾಸದ ವಿವರವನ್ನು ನಿಮಗೆ ತಲುಪಿಸುತ್ತೇನೆ ಎಂದು ವೈಎಸ್​.ವಿ ದತ್ತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com