ನಾನು ಎಸ್.ಎಂ ಕೃಷ್ಣ ಶಿಷ್ಯನಲ್ಲ ಎಂಬ ಹೇಳಿಕೆ: ಪ್ಲೇಟ್ ಬದಲಿಸಿದ ಡಿಸಿಎಂ; ಡ್ಯಾಮೇಜ್ ಕಂಟ್ರೋಲ್ ಗೆ ಡಿಕೆಶಿ ಮಾಡಿದ್ದೇನು?

ನಾನು ಎಸ್‌ಎಂ ಕೃಷ್ಣ ಶಿಷ್ಯನಲ್ಲ, ನಾನು ಬಂಗಾರಪ್ಪ ಶಿಷ್ಯ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಹೇಳಿಕೆ ನೀಡಿದ ಮರುದಿನವೇ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಲಿಗೆ ನಮಸ್ಕರಿಸಿದ್ದಾರೆ.
ಎಸ್.ಎಂ ಕೃಷ್ಣ ಭೇಟಿಯಾದ ಡಿ.ಕೆ ಶಿವಕುಮಾರ್
ಎಸ್.ಎಂ ಕೃಷ್ಣ ಭೇಟಿಯಾದ ಡಿ.ಕೆ ಶಿವಕುಮಾರ್

ಬೆಂಗಳೂರು: ನಾನು ಎಸ್‌ಎಂ ಕೃಷ್ಣ ಶಿಷ್ಯನಲ್ಲ, ನಾನು ಬಂಗಾರಪ್ಪ ಶಿಷ್ಯ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಹೇಳಿಕೆ ನೀಡಿದ ಮರುದಿನವೇ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಲಿಗೆ ನಮಸ್ಕರಿಸಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ನಡೆದ ರಾಜೀವ್‌ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ʻನಾನು ಬಂಗಾರಪ್ಪ ಶಿಷ್ಯ, ಎಸ್‌ಎಂ ಕೃಷ್ಣ ಶಿಷ್ಯನಲ್ಲ. 1990ರಲ್ಲಿ ವೀರೇಂದ್ರ ಪಾಟೀಲ್‌ ಅವರು ಅನಾರೋಗ್ಯಕ್ಕೆ ಈಡಾದ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಲಹೆ ನೀಡಿದವರಲ್ಲಿ ನಾನೂ ಒಬ್ಬ ಎಂದು ಹೇಳಿದ್ದರು. ಇದು ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಇದುವರೆಗೆ ತಾನು ಎಸ್‌ಎಂ ಕೃಷ್ಣ ಅವರ ಶಿಷ್ಯ ಎಂದು ಹೇಳಿಕೊಂಡಿದ್ದ ಡಿ.ಕೆ. ಶಿವಕುಮಾರ್‌ ಒಮ್ಮಿಂದೊಮ್ಮೆಗೆ ಪ್ಲೇಟ್‌ ಬದಲಿಸಿದ್ದು ಯಾಕೆ ಎಂದು ಚರ್ಚೆ ಹುಟ್ಟುಹಾಕಿತ್ತು.

ಇದಾಗಿ ಒಂದೇ ದಿನದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಸದಾಶಿವ ನಗರದ ನಿವಾಸಕ್ಕೆ ತೆರಳಿ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಎಸ್‌.ಎಂ. ಕೃಷ್ಣ ಅವರ ಕಾಲುಗಳಿಗೆ ನಮಸ್ಕರಿಸಿ, ಅವರಿಗೆ ಶಾಲು ಹೊದೆಸಿ, ಕಾಣಿಕೆ ರೂಪದಲ್ಲಿ ಪುಸ್ತಕವನ್ನು ನೀಡಿ ಗೌರವಿಸಿದ್ದಾರೆ. ಇದು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ.

ಮಾತಿನ ರಭಸದಲ್ಲಿ ಮನದ ಮಾತುಗಳನ್ನೆಲ್ಲ ಆಡಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ತಾನಾಡಿದ ಮಾತುಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಅನಿಸಿದಂತೆ ಕಾಣಿಸುತ್ತಿದೆ. ಹೀಗಾಗಿ ಅವರು ಎಸ್‌.ಎಂ. ಕೃಷ್ಣ ಅವರ ಮನೆಗೆ ಹೋದಂತೆ ಕಾಣಿಸುತ್ತಿದೆ. ತನ್ನ ಮಾತು ಹಳೇಮೈಸೂರು ಭಾಗದ ಒಕ್ಕಲಿಗರ ಅಸಮಾಧಾನಕ್ಕೆ ಅವಕಾಶ ಮಾಡಿಕೊಂಡದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಶಿವಕುಮಾರ್‌ ಮುಂದಾಗಿರುವ ಸಾಧ್ಯತೆ ಇದೆ.

ತಮ್ಮ ಮನೆಗೆ ಬಂದು ಕಾಲಿಗೆ ಬಿದ್ದು ಆಶೀರ್ವಾದ ಕೋರಿದ ಡಿ.ಕೆ. ಶಿವಕುಮಾರ್‌ ಅವರನ್ನು ಎಸ್‌.ಎಂ. ಕೃಷ್ಣ ಅವರು ಪುಸ್ತಕದ ಉಡುಗೊರೆ ಮೂಲಕ ಹರಸಿದ್ದಾರೆ. ಬ.ನ.ಸುಂದರ ರಾವ್ ಬರೆದಿರುವ ಪುಸ್ತಕ ʻಬೆಂಗಳೂರಿನ ಇತಿಹಾಸʼವನ್ನು ಹಸ್ತಾಕ್ಷರ ಸಹಿತವಾಗಿ ಉಡುಗೊರೆಯಾಗಿ ನೀಡಿದ್ದಾರೆ ಎಸ್ ಎಂ ಕೃಷ್ಣ. ಇದರಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಗೆಳೆಯ ಎಂದು ಕರೆದಿದ್ದಾರೆ ಎಸ್ಸೆಂ ಕೃಷ್ಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com