ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಚಾಟ್ಸ್ ತಿನ್ನುತ್ತಿದ್ದವರ ಮೇಲೆ ಹಲ್ಲೆಗೆ ಯತ್ನ; ಯುವತಿಯಿಂದ ದೂರು ದಾಖಲು
ನಗರದಲ್ಲಿ ಅನ್ಯಕೋಮಿನ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ, ಯುವಕರ ಗುಂಪು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
Published: 26th May 2023 10:21 AM | Last Updated: 26th May 2023 10:21 AM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ನಗರದಲ್ಲಿ ಅನ್ಯಕೋಮಿನ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ, ಯುವಕರ ಗುಂಪು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಬುಧವಾರ ಸಂಜೆ ನಗರದ ಚಾಟ್ ಸೆಂಟರ್‌ನಲ್ಲಿ ಯುವಕರ ಗುಂಪೊಂದು ವಿಭಿನ್ನ ಧರ್ಮದ ಹುಡುಗಿ ಮತ್ತು ಹುಡುಗನಿಗೆ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ. ಈ ನೈತಿಕ ಪೊಲೀಸ್ ಗಿರಿಯ ವಿಡಿಯೋ ವೈರಲ್ ಆಗಿದೆ. ಹಿಂದೂ ಯುವಕನ ಜೊತೆ ಅನ್ಯಕೊಮಿನ ಯುವತಿ ಆಗಮಿಸಿದ್ದಳು. ಈ ವೇಳೆ ಬಂದ ಗುಂಪೊಂದು ಯುವತಿಯಿಂದ ದೂರ ಇರುವಂತೆ ಯುವಕನಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಯುಕ ಅವರ ಮಾತನ್ನು ನಿರ್ಲಕ್ಷ್ಯಿಸಿ ಹೊರಟಿದ್ದಾನೆ, ಇದರಿಂದ ಆತನ ಮೇಲೆ ಗುಂಪು ಹಲ್ಲೆಗೆ ಯತ್ನಿಸಿದೆ ಎನ್ನಲಾಗಿದೆ.
ಯುವಕ ಶಿಡ್ಲಘಟ್ಟ ಮೂಲದವನಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಓದುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ನಾಗೇಶ್ ಹೇಳಿದ್ದಾರೆ. ಆತನ ಸಹಪಾಠಿಯಾಗಿದ್ದ ಯುವತಿ ತನ್ನ ವಿದ್ಯಾಭ್ಯಾಸ ನಿಲ್ಲಿಸಿ ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.