ರಾಯಚೂರು ಜಿಲ್ಲೆಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 25 ಮಂದಿ ಅಸ್ವಸ್ಥ: ತುರ್ತು ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಯಚೂರು ಜಿಲ್ಲೆಯ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು/ರಾಯಚೂರು: ರಾಯಚೂರು ಜಿಲ್ಲೆಯ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದೂರವಾಣಿ ಮೂಲಕ ಸಿಇಒ ಅವರೊಂದಿಗೆ ಮಾತನಾಡಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಶುದ್ಧ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ರಾಯಚೂರು ಜಿಲ್ಲೆಯ ಗ್ರಾಮಗಳಲ್ಲಿ ಕಲುಷಿತ ನೀರು ಕುಡಿದು ಜನ ಅಸ್ವಸ್ಥರಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು, ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.

ಮುಖ್ಯಮಂತ್ರಿಗಳು ಕೊಟ್ಟ ಸೂಚನೆಗಳೇನು?: ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು,ನೀರಿನ ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿ ತಕ್ಷಣ ವರದಿ ತರಿಸಿಕೊಳ್ಳಬೇಕು, ವರದಿ ಆಧಾರದಲ್ಲಿ ಗ್ರಾಮಸ್ಥರ ಕೂಲಂಕುಷ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಎಲ್ಲ ಕ್ರಮಗಳನ್ನೂ ಸಮರ್ಪಕವಾಗಿ ತೆಗೆದುಕೊಂಡು ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಮೊನ್ನೆ 26ರಂದು ಓರ್ವ ಬಾಲಕ ಮೃತಪಟ್ಟ ಘಟನೆ ನಡೆದಿತ್ತು. ಈ ಸಂಬಂಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು. ಈಗ ರೇಕಲಮರಡಿ ಗ್ರಾಮದ ಬಳಿಕ ಮತ್ತೊಂದು ಗ್ರಾಮದಲ್ಲಿ ಕಲುಷಿತ ನೀರು ಕುಡಿದು‌ 25 ಜನ ಅಸ್ವಸ್ಥಗೊಂಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಕಲುಷಿತ ನೀರಿನಿಂದಾಗಿ ಜನ ಜೀವದ ಜೊತೆ ಹೋರಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ.

ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 25 ಜನ ಅಸ್ವಸ್ಥಗೊಂಡಿದ್ದು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಜನ ಬಳಲುತ್ತಿದ್ದಾರೆ. ಈ ಪೈಕಿ ಮೂವರಿಗೆ ಲಿಂಗಸುಗೂರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಕೆಲವರಿಗೆ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊರಿಗೆ ಸರಬರಾಜು ಆಗುತ್ತಿರುವ ನೀರಿನಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದ್ದು ಸದ್ಯ ಗೊರೆಬಾಳ ಗ್ರಾಮದಲ್ಲೇ ವೈದ್ಯರ ತಂಡ ಠಿಕಾಣಿ ಹೂಡಿದೆ. ಈಗಾಗಲೇ ಗ್ರಾಮದ ನೀರಿನ ಸ್ಯಾಂಪಲ್ಸ್ ಪಡೆದು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com