'ಧರ್ಮ ಎಂಬುದು ಜೀವನದ ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ ಎಂಬ ಸತ್ಯ ಗೊತ್ತಿರಲಿ'

ನೂತನ ಸಂಸತ್ ಭವನ ಕಟ್ಟಡ ಕುರಿತು ಟೀಕಿಸಿ ಟ್ವೀಟ್ ಮಾಡಿದ್ದ ಸಂಸದ ಕಪಿಲ್ ಸಿಬಲ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಕಪಿಲ್ ಸಿಬಲ್ ಮತ್ತು ಪ್ರಹ್ಲಾದ್ ಜೋಶಿ
ಕಪಿಲ್ ಸಿಬಲ್ ಮತ್ತು ಪ್ರಹ್ಲಾದ್ ಜೋಶಿ

ಬೆಂಗಳೂರು: ನೂತನ ಸಂಸತ್ ಭವನ ಕಟ್ಟಡ ಕುರಿತು ಟೀಕಿಸಿ ಟ್ವೀಟ್ ಮಾಡಿದ್ದ ಸಂಸದ ಕಪಿಲ್ ಸಿಬಲ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೋಶಿ, ಪ್ರಧಾನಿ ಮೋದಿ ಅವರ ಕಾಲದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಯಿತಲ್ಲ ಎಂದು ಕಾಂಗ್ರೆಸ್ ಹೊಟ್ಟೆಯುರಿ ಪಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಸದ ಕಪಿಲ್ ಸಿಬಲ್ ಅವರು ಭಾರತದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸಂಸತ್ ಭವನ ಕಾರ್ಯಕ್ರಮದಲ್ಲೂ ಧರ್ಮ ಎತ್ತೆಣಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಅಮಾಯಕ ರಾಮಭಕ್ತರನ್ನು ಧಾರ್ಮಿಕ ದ್ವೇಷದಿಂದ ಹತ್ಯೆಗೈದ ಸಮಾಜವಾದಿ ಪಕ್ಷದ ಜೊತೆ ಸೇರಿರುವ ನಿಮ್ಮಂತಹವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ.

ಶಾ ಬಾನೊ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರ ಹೋರಾಟವನ್ನು ಹತ್ತಿಕ್ಕಲು ಅಂದಿನ ನಿಮ್ಮ ಕಾಂಗ್ರೆಸ್ ಸರ್ಕಾರ ಯಾವ ರೀತಿ ಪ್ರಯತ್ನಿಸಿತ್ತು ನೆನಪಿಸಿಕೊಳ್ಳಿ ಎಂದಿದ್ದಾರೆ. ಭಾರತದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸಂಸತ್ ಭವನದ ವಿಚಾರದಲ್ಲೂ ಧರ್ಮ ಹುಡುಕುವ ಮೊದಲು, ಧರ್ಮ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ.

ಈ ಸತ್ಯವನ್ನ ಸಿಬಲ್ ಅವರು ಅರ್ಥಮಾಡಿಕೊಳ್ಳಲಿ. ಎಲ್ಲಾ ಸಮುದಾಯಗಳ ಧಾರ್ಮಿಕ ಪಾರ್ಥನೆಯೊಂದಿಗೆ ನೂತನ ಸಂಸತ್ ಭವನ ಲೋಕಾರ್ಪಣೆಗೊಂಡಿದ್ದು ಕಂಡಿಲ್ಲವೇ? ಎಂದು ಸಿಬಲ್ ಅವರನ್ನು ಇದೇ ವೇಳೆ ಅವರು ಪ್ರಶ್ನಿಸಿದರು. ಈ ಆತ್ಮನಿರ್ಭರ ಭಾರತದ ಅಡಿಯಲ್ಲಿ ನಿರ್ಮಿಸಲಾದ ಸಂಸತ್ ಭವನ ಕಂಡಾಗ ನಿಮ್ಮಂತವರಿಗೆ ಉರಿ ಎದ್ದಿರುವುದು ಸಹಜ. ಭಾರತದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಅದುವೇ ನಮ್ಮ ಧೈರ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com