ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಲು ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಮನವಿ

ಮಗುವೊಂದರ ಜೀವ ಉಳಿಸುವುದಕ್ಕಾಗಿ ಅತಿ ದುಬಾರಿ ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ- ಪ್ರಧಾನಿ ನರೇಂದ್ರ ಮೋದಿ
ಸಿಎಂ ಸಿದ್ದರಾಮಯ್ಯ- ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ರಾಜ್ಯದಲ್ಲಿ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವೊಂದರ ಜೀವ ಉಳಿಸುವುದಕ್ಕಾಗಿ ಅತಿ ದುಬಾರಿ ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

15 ತಿಂಗಳ ಮಗು ಮೌರ್ಯಗೆ, ನರಮಂಡಲದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA)ಯ ಸಮಸ್ಯೆ ಎದುರಾಗಿದ್ದು, ಈ ಆರೋಗ್ಯ ಸಮಸ್ಯೆಯಿಂದ ಮಗುವನ್ನು ಉಳಿಸುವುದಕ್ಕಾಗಿ ಸುಮಾರು 17.5 ಕೋಟಿ ರೂಪಾಯಿ ಮೌಲ್ಯದ ಜೋಲೊಗೆನ್ಸ್ಮಾ (zologensma) ಎಂಬ ಔಷಧ ನೀಡುವ ಅಗತ್ಯವಿದೆ. ಈ ಔಷಧದ ಬೆಲೆಯೇ ಅತಿ ದುಬಾರಿಯಾಗಿದ್ದು ಅದಕ್ಕೆ ಆಮದು ತೆರಿಗೆ ವಿಧಿಸಿದರೆ ಅದರ ಶುಲ್ಕ ಮತ್ತಷ್ಟು ಹೆಚ್ಚಳವಾಗಲಿದೆ.

ಈ ಹಿನ್ನೆಲೆಯಲ್ಲಿ ಅ.27 ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಮಗುವಿವ ಪೋಷಕರಿಗೆ ದುಬಾರಿ ಔಷಧಿಗೆ ಹೊಂದಿಸುವಷ್ಟು ಹಣ ಇಲ್ಲದ ಕಾರಣ ಆಮದು ತೆರಿಗೆ ವಿನಾಯಿತಿ ಜೊತೆಗೆ ಪಿಎಂ ಕೇರ್ಸ್ ನಿಂದ ಕುಟುಂಬಕ್ಕೆ ನೆರವು ನೀಡುವಂತೆಯೂ ಮನವಿ ಮಾಡಿದ್ದಾರೆ.

SMA ಎಂಬುದು ನರಸ್ನಾಯುಕ ಆನುವಂಶಿಕ ಅಸ್ವಸ್ಥತೆಯಾಗಿದ್ದು, ದೇಹದಲ್ಲಿನ ಸ್ವಯಂಪ್ರೇರಿತ ಸ್ನಾಯುವಿನ ಚಲನೆಯನ್ನು ನಿಯಂತ್ರಿಸುವ ನರ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತೋಳುಗಳು, ಕಾಲುಗಳು, ಮುಖ, ಎದೆ, ಗಂಟಲು ಮತ್ತು ನಾಲಿಗೆಯಲ್ಲಿನ ನಿಯಂತ್ರಣ ಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಮಾತನಾಡುವುದು, ನಡೆಯುವುದು, ನುಂಗುವುದು ಮತ್ತು ಉಸಿರಾಟದಂತಹ ಅಸ್ಥಿಪಂಜರದ ಸ್ನಾಯುವಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com