ವರ್ಷದ ನಂತರ ಬಾಗಿಲು ತೆರೆದ ಹಾಸನಾಂಬ ದೇಗುಲ: ಭಕ್ತರಿಗೆ ನಾಳೆಯಿಂದ ದರುಶನಕ್ಕೆ, ವಿನೂತನ ವೈಮಾನಿಕ ವೀಕ್ಷಣೆಗೆ ಅವಕಾಶ

ಐತಿಹಾಸಿಕ ಹಾಗೂ ಪವಾಡ ಸ್ವರೂಪಿಣಿಯಾದ ಹಾಸನ ಜಿಲ್ಲೆಯ ಪ್ರಸಿದ್ಧ ದೇಗುಲ ಹಾಸನಾಂಬೆಯ ದರುಶನ ವರ್ಷದ ಬಳಿಕ ಇಂದು ನವೆಂಬರ್ 2ರಂದು ಭಕ್ತಾದಿಗಳಿಗೆ ಮುಕ್ತವಾಗಿದೆ. 
ಹಾಸನಾಂಬೆ ದೇಗುಲ
ಹಾಸನಾಂಬೆ ದೇಗುಲ

ಹಾಸನ: ಐತಿಹಾಸಿಕ ಹಾಗೂ ಪವಾಡ ಸ್ವರೂಪಿಣಿಯಾದ ಹಾಸನ ಜಿಲ್ಲೆಯ ಪ್ರಸಿದ್ಧ ದೇಗುಲ ಹಾಸನಾಂಬೆಯ ದರುಶನ ವರ್ಷದ ಬಳಿಕ ಇಂದು ನವೆಂಬರ್ 2ರಂದು ಭಕ್ತಾದಿಗಳಿಗೆ ಮುಕ್ತವಾಗಿದೆ. 

ಇಂದು ಗುರುವಾರ ಮಧ್ಯಾಹ್ನ 12 ಗಂಟೆ 23 ನಿಮಿಷಕ್ಕೆ ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು, ಸಾರ್ವಜನಿಕರಿಗೆ ನಾಳೆ ನ.3ರಿಂದ ನ.14ರವರೆಗೆ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ ಇರುತ್ತದೆ. ಇಂದು ಹಾಸನಾಂಬೆಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯ ಪ್ರಕ್ರಿಯೆಗಳಷ್ಟೇ ನಡೆಯಲಿದೆ. ನಾಳೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಅವಕಾಶವಿದೆ. 

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 2 ರಿಂದ 15 ವರೆಗೆ ಹಾಸನಾಂಬ ಉತ್ಸವ ಜರುಗಲಿದೆ. ಹಾಸನಾಂಬೆಯ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಡಳಿತದಿಂದ ವಿಶೇಷ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡಲಾಗಿದೆ. 

ಇದೇ ಮೊದಲ ಬಾರಿಗೆ ದೇವಿಯ ದರ್ಶನದ ಜೊತೆ ಜೊತೆಯಲ್ಲೇ ಹಲವು ರೀತಿಯ ಹೊಸ ಪ್ರಯೋಗ, ನವ ವಿಧಾನ ಅಳವಡಿಸಲಾಗುತ್ತಿದೆ. ವಿವಿಧೆಡೆಗಳಿಂದ ಬರುವ ಭಕ್ತರು, ಪ್ರವಾಸಿಗರಿಗೆ ಹಾಸನಾಂಬೆ ದರ್ಶನ ದರ್ಶನ ಮಾಡಿಸುವುದರ ಜೊತೆಗೆ ಅವರಿಗೆ ಹಾಸನ ಜಿಲ್ಲೆಯ ಐತಿಹಾಸಿಕ ಮಹತ್ವ, ಪ್ರಾಕೃತಿಕ ಸೊಬಗು, ಶಿಲ್ಪಕಲೆ ಹಾಗೂ ಸಾಂಸ್ಕೃತಿಕ ವೈಭವ ಪರಿಚಯಿಸುವುದರ ಜೊತೆಗೆ ಮನರಂಜನೆ, ಮನೋಲ್ಲಾಸ ಉಣ ಬಡಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಇದು ಯಶಸ್ಸಿಯಾದರೆ ಒಟ್ಟಾರೆ ಭಕ್ತರು ಹಾಗೂ ಜನಮಾನಸದಲ್ಲಿ ಉಳಿಯುವ ಉತ್ಸವ ಇದಾಗಲಿದೆ. 

ನಾಳೆಯಿಂದ 12 ದಿನ 24 ಗಂಟೆಯೂ ದರ್ಶನ: ದೇವಾಲಯದ ಪ್ರಧಾನ ಅರ್ಚಕ ನಾಗರಾಜ ಅವರ ನೇತೃತ್ವದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮಿಗಳ ಸಮ್ಮುಖದಲ್ಲಿ ಇಂದು ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ. 

ವೈಮಾನಿಕ ವೀಕ್ಷಣೆ: ಈ ಸಲದ ಉತ್ಸವದ ಮತ್ತೊಂದು ವಿಶೇಷತೆ ಎಂದರೆ ಆಗಸದಿಂದ ಹಾಸನ ಎಂಬ ವಿನೂತನ ವೈಮಾನಿಕ ವೀಕ್ಷಣೆ ಮಾಡಿರುವುದು. ನ.3 ರಿಂದ 6 ರವರೆಗೆ ಒಬ್ಬರು 4,300 ರೂ. ಪಾವತಿಸಿದರೆ 6-7 ನಿಮಿಷ ಆಗಸದಲ್ಲಿ ಹಾರಾಡಿ ಹಾಸನ ನಗರ, ಸೀಗೆಗುಡ್ಡ, ಮಳೆ ಮಲ್ಲೇಶ್ವರ ದೇವಾಲಯ, ಗೆಂಡೆಕಟ್ಟೆ ವನ್ಯಧಾಮವನ್ನು ಮೇಲಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಹೆಲಿಕಾಪ್ಟರ್ ಸರ್ಕಾರಿ ಕಾಲೇಜು ಆವರಣದಿಂದ ಹೊರಟು ಅಲ್ಲೇ ಬಂದು ಇಳಿಯಲಿದೆ. ಇಂದು ಒಂದಾದರೆ ಇಡೀ ನಗರದ ತುಂಬೆಲ್ಲಾ ಖಾಸಗಿ ಕಟ್ಟಡ ಸೇರಿದಂತೆ ಸರ್ಕಾರಿ ಕಟ್ಟಡ, ಪ್ರಮುಖ ರಸ್ತೆ ಹಾಗೂ ಜಿಲ್ಲಾದ್ಯಂತ ಎ ಮತ್ತು ಬಿ ಗ್ರೇಡ್ ದೇವಾಲಯಗಳಲ್ಲಿ ಅಲಂಕಾರ ಜೊತೆಗೆ ನಿತ್ಯ ಪೂಜೆ ಮಾಡಲು ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com