ಬಿಜೆಪಿ ಆಡಳಿತದಲ್ಲಿ ಕಿಯೋನಿಕ್ಸ್​ನಲ್ಲಿ 500 ಕೋಟಿ ರೂ. ಅವ್ಯವಹಾರ; ನಾಗಮೋಹನ್​ ದಾಸ್ ನೇತೃತ್ವದಲ್ಲಿ ತನಿಖೆ: ಪ್ರಿಯಾಂಕ್ ಖರ್ಗೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ(ಕಿಯೊನಿಕ್ಸ್) ಸುಮಾರು 500 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಕಿಯೋನಿಕ್ಸ್) ಸುಮಾರು 500 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷ ಆರೋಪಿಸಿದಂತೆ ಅಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಮಾತ್ರ ಪಡೆದಿಲ್ಲ. ಶೇಕಡಾ 400 ಕ್ಕಿಂತ ಹೆಚ್ಚು ಕಮಿಷನ್ ಪಡೆದಿದೆ ಎಂದು ಐಟಿ-ಬಿಟಿ ಸಚಿವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕಿಯೋನಿಕ್ಸ್‌ನಲ್ಲಿ ಒಂದೇ ಒಂದು ಆದೇಶ ಹೊರಡಿಸಿಲ್ಲ ಅಥವಾ ಸಂಸ್ಥೆ ಮೂಲಕ ಯಾವುದೇ ಖರೀದಿ ನಡೆದಿಲ್ಲ ಎಂದು ತಿಳಿಸಿದರು.

2019 ರಿಂದ 2023 ರವರೆಗೆ ನಡೆದಿರುವ 500 ಕೋಟಿ ರೂಪಾಯಿ ಅಕ್ರಮವನ್ನು ಲೆಕ್ಕಪರಿಶೋಧನಾ ವರದಿ ಎತ್ತಿ ತೋರಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರವು ಕೇವಲ 40 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿರಲಿಲ್ಲ. 400 ಪರ್ಸೆಂಟ್ ಕಮಿಷನ್‌ ಸರ್ಕಾರ ಆಗಿತ್ತು. ಇದನ್ನು ನಾನು ಹೇಳುತ್ತಿಲ್ಲ. ಆಡಿಟ್ ರಿಪೋರ್ಟ್ ಹೇಳುತ್ತಿದೆ ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

300 ಕೋಟಿ ಮೊತ್ತದ ಬಿಲ್‌ಗಳನ್ನು ಕ್ಲಿಯರ್ ಮಾಡಲು ಕಿಯೋನಿಕ್ಸ್‌ನ ಅಧಿಕಾರಿಯೊಬ್ಬರು 38 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಜೆಪಿಯ ಕೆಲವು ಮುಖಂಡರು ಆರೋಪಿಸಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಇದರಲ್ಲಿ ಖರ್ಗೆ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಅವರೇ ತಿಂದು ತೇಗಿದ್ದಾರೆ. ಈಗ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ. ಈ ಬಗ್ಗೆ ನಾವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ. ತನಿಖೆಯಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿರುವ ಹೊಣೆಗಾರಿಕೆ ಮತ್ತು ಪಾರದರ್ಶಕತೆ ನಿಯಮಗಳಲ್ಲಿನ ಬದಲಾವಣೆಗಳು ಅನೇಕ ಮಾಜಿ ಸಚಿವರು ಮತ್ತು ಶಾಸಕರಿಗೆ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿಯೇ ಅವರು ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಲ್ ಪಾವತಿ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಎಷ್ಟು ಬಿಲ್ ಬಾಕಿ ಇದೆ ಎಂದು ಕೇಳಿ. ಅವರ ಆರೋಪವನ್ನು ಬೆಂಬಲಿಸಲು ಅವರು ಯಾವುದೇ ಹೋಮ್ ವರ್ಕ್ ಮಾಡಿದ್ದಾರೆ ಅಥವಾ ಯಾವುದೇ ದಾಖಲೆಯನ್ನು ನೀಡಿದ್ದಾರೆಯೇ? ಕೇವಲ 16.27 ಕೋಟಿ ರೂ. ಬಿಲ್ ಬಾಕಿ ಇದೆ. ಮ್ಯಾನ್ಯುವಲ್ ಬಿಲ್ಲಿಂಗ್ ಆಗಿದೆ. ಅದನ್ನು ಪರಿಶೀಲಿಸುವುದಕ್ಕೆ ನಾವು ಪೆಂಡಿಂಗ್ ಇಟ್ಟಿದ್ದೇವೆ ಎಂದರು.

ಅಕೌಂಟೆಂಟ್ ಜನರಲ್ ಆಡಿಟ್ ತಂಡ ಪತ್ತೆ ಹಚ್ಚಿದ ಕೆಲವು ಅಕ್ರಮಗಳನ್ನು ಬಹಿರಂಗಪಡಿಸಿದ ಸಚಿವರು, ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. 1 ಲಕ್ಷ ಇರೋದಕ್ಕೆ 5 ಲಕ್ಷ ಕೊಟ್ಟ ಖರೀದಿಸಿದ್ದಾರೆ. ಶೇ. 38 ರಿಂದ ಶೇ. 1770 ವರೆಗೆ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.

3000 ಬೆಲೆ ಬಾಳುವುದನ್ನ 60 ರೂ ಗೆ ಮಾರಿದ್ದಾರೆ. 30 ಸಾವಿರದ ಕಂಪ್ಯೂಟರ್ ಅನ್ನು 80 ಸಾವಿರ ರೂ. ಬೆಲೆ ಕೊಟ್ಟು ಖರೀದಿಸಿದ್ದಾರೆ. ಸಿಸಿಟಿವಿ 12 ಸಾವಿರ ಇರುವುದಕ್ಕೆ 60 ಸಾವಿರ ರೂ. ಕೊಟ್ಟಿದ್ದಾರೆ. ಕಂಪ್ಯೂಟರ್ 1.4 ಲಕ್ಷಕ್ಕೆ ಖರೀದಿಸಿದ್ದಾರೆ. ಇವೆಲ್ಲವೂ ಬಿಜೆಪಿ ಅವಧಿಯಲ್ಲಿ ಮಾಡಿರುವುದು. ಇದನ್ನ ಥರ್ಡ್ ಪಾರ್ಟಿ ಇನ್ಸ್ ಪೆಕ್ಷನ್ ಇಲ್ಲದೆ ದುಡ್ಡು ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com