ಶಿವಮೊಗ್ಗದಲ್ಲಿ ಒಂದು ಸಣ್ಣ ಗಲಭೆ ಆಗಿದೆ, ಅಹಿತಕರ ಘಟನೆ ನಡೆಯುವ ಮಾಹಿತಿಯಿತ್ತು, ಹೀಗಾಗಿ ಪೊಲೀಸ್ ಭದ್ರತೆ ಒದಗಿಸಿದ್ದೆವು: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಶಿವಮೊಗ್ಗ ಹೊರವಲಯದ ಶಾಂತಿನಗರ ರಾಗಿಗುಡ್ಡದಲ್ಲಿ ನಿನ್ನೆ ಈದ್ ಮಿಲಾದ್ ಮೆರವಣಿಗೆ ವೇಳೆ ಸಣ್ಣ ಗಲಭೆಯಾಗಿದೆ, ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಇಂದು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ ಘಟನೆಯೇನು ಹೊಸದಲ್ಲ, ಈ ಹಿಂದೆಯೂ ಇಂತಹ ಘಟನೆಯಾಗಿವೆ. ನಮ್ಮ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ನಮಗೆ ಮೊದಲೇ ಮಾಹಿತಿಯಿತ್ತು. ಹೀಗಾಗಿ ಮೊದಲೇ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಮೆರವಣಿಗೆ ಹೋಗುವ ಸಂದರ್ಭದಲ್ಲಿ ಯಾವುಗೇ ಅಹಿತಕರ ಘಟನೆ ನೀಡಬಹುದು ಎಂದು ನಮಗೆ ಮೊದಲೇ ಗೊತ್ತಿತ್ತು, ದೊಡ್ಡ ಮಟ್ಟದಲ್ಲಿ ಆಗುವ ಗಲಭೆಯನ್ನು ಸಮರ್ಥರಾಗಿರುವ ನಮ್ಮ ಪೊಲೀಸರು ನಿಯಂತ್ರಣ ಮಾಡಿದ್ದಾರೆ ಎಂದರು.
ಪೋಲೀಸರು ದೊಡ್ಡ ಪ್ರಮಾಣದ ಗಲಾಟೆ ತಪ್ಪಿಸಿದ್ದಾರೆ. ಎರಡೂ ಗುಂಪಿನ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ. ಇದನ್ನು ಕೆಲವರು ಅಡ್ವಾಂಟೇಜ್ ಆಗಿ ತಗೋತಾರೆ ಎಂದರು. ಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ ಪರಮೇಶ್ವರ್ ಅವರು, ಶಿವಮೊಗ್ಗದಲ್ಲಿ ಕಲ್ಲು ತೂರಾಟ ಮಾಡಿದರು ಎಂಬ ಮಾಹಿತಿ ಇದೆ. ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲ ಎಂದು ಹೇಳಿದರು.
ಹೊರಗಿನಿಂದ ಯಾರನ್ನೂ ಬರಲು ಬಿಟ್ಟಿಲ್ಲ: ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಹೊರಗಿನಿಂದ ಬಂದವರ ಕೈವಾಡವಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ನಾವು ಎಲ್ಲಾ ರೋಡ್ ಗಳನ್ನು ರೆಗ್ಯುಲೇಟ್ ಮಾಡಿದ್ದೇವೆ. ಏನಾಗಿದೆ ಎಂದು ನಮಗೆ ಗೊತ್ತಿದೆ, ಹೇಳಿಕೆ ಕೊಡುವವರು ಕೊಡ್ತಾರೆ ಎಂದರು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಗುಡ್ಡ, ಶಾಂತಿನಗರದಲ್ಲಿ ಪೊಲೀಸ್ ಹೈಅಲರ್ಟ್ ಆಗಿದ್ದಾರೆ. ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಪೊಲೀಸರಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬೈಕ್ ಸವಾರ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ