ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಅತಿವೃಷ್ಟಿ, ಅನಾವೃಷ್ಠಿ, ಬರಗಾಲ: ಬದಲಾದ ವಾತಾವರಣಕ್ಕೆ ತಕ್ಕಂತೆ ರೈತ ಪರ ಸಂಶೋದನೆಗಳಾಗಬೇಕು- ಸಿಎಂ

ಕೃಷಿ ವಿಶ್ವ ವಿದ್ಯಾಲಯಗಳಿಂದ ಎಷ್ಟು ಪದವೀದರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Published on

ಹಿರಿಯೂರು: ಕೃಷಿ ವಿಶ್ವ ವಿದ್ಯಾಲಯಗಳಿಂದ ಎಷ್ಟು ಪದವೀದರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಶತಮಾನೋತ್ಸವ ಮತ್ತು ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣವನ್ನು  ಉದ್ಘಾಟಿಸಿ ಮಾತನಾಡಿದರು. 

ಸಂಶೋಧನೆಗಳಿಗೆ ಸಕಲ ನೆರವು ನೀಡಲು ಸರ್ಕಾರ ಸಿದ್ದವಾಗಿದೆ ಮತ್ತು  ಬದ್ದವಾಗಿದೆ. ಎಷ್ಟು ತಳಿ, ಎಷ್ಟು ರೋಗಕ್ಕೆ ಔಷಧ ಕಂಡು ಹಿಡಿದಿದ್ದೀರಿ, ಎಷ್ಟು ರೋಗನಿರೋಧಕ ಔಷಧಗಳನ್ನು ಕಂಡು ಹಿಡಿದಿದ್ದೀರಿ ಎನ್ನುವುದು ನಿಮ್ಮ ಆಧ್ಯತೆಯಾಗಲಿ ಎಂದು ಕರೆ ನೀಡಿದರು. 

ಬೆಳೆದ ಬೆಳೆಗೆ ಬೆಲೆ ಇಲ್ಲ. ಅತಿವೃಷ್ಟಿ, ಅನಾವೃಷ್ಠಿ, ಬರಗಾಲ ರೈತರನ್ನು ಕಾಡುತ್ತಿದೆ. ಹೀಗಾಗಿ ಬದಲಾದ ವಾತಾವರಣಕ್ಕೆ ತಕ್ಕಂತೆ ರೈತ ಪರವಾದ ಸಂಶೋದನೆಗಳು ನಡೆಯಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ ಎಂದರು. 

80 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿದ್ದರೆ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೀಗಾಗಿ ರಾಜ್ಯ ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 4860 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ನಾವು ಮನವಿ ಮಾಡಿದ್ದರೂ ನಮಗೆ ಆಗಿರುವ ನಷ್ಟದ ಪ್ರಮಾಣ 30 ಸಾವಿರ ಕೋಟಿಗೂ ಅಧಿಕ. ಇದನ್ನೆಲ್ಲಾ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ. ಈಗ ಇನ್ನಷ್ಟು ಬರಗಾಲಕ್ಕೆ ತುತ್ತಾಗಿದೆ. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ನೀಡಲಿ. ನಮ್ಮ ಸರ್ಕಾರ ಮಾತ್ರ ಜನರಿಗೆ, ರೈತರಿಗೆ, ರಾಸುಗಳಿಗೆ, ಗೋವುಗಳಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು ಬದ್ದವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. 

ಚಿತ್ರದುರ್ಗ ಜಿಲ್ಲೆಗೆ ಕೃಷಿ ಮತ್ತು ಕುಡಿಯುವ ನೀರಿಗಾಗಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ನಾವು ಬದ್ದರಾಗಿದ್ದೇವೆ. ನೀರಾವರಿ, ಕೃಷಿಗೆ ಹೆಚ್ಚಿನ ಅನುದನ ನೀಡುತ್ತೇವೆ. ರೈತ ಸಮುದಾಯದ ಜತೆ ನಾವು ಗಟ್ಟಿಯಾಗಿ ನಿಂತಿದ್ದೇವೆ ಎಂದು ಭರವಸೆ ನೀಡಿದರು. 

ಕೃಷಿ, ತೋಟಗಾರಿಕಾ ವಿವಿ ಗಳಲ್ಲಿ ಸಂಶೋಧನೆಗಳು ಹೆಚ್ಚೆಚ್ಚು ಆಗಬೇಕು. ಹವಾಮಾನ ಬದಲಾವಣೆಯಲ್ಲಿ ಯಾವ ಬೆಳೆಗೆ ಹೆಚ್ಚು ಮಹತ್ವವಿದೆ, ರೈತರಿಗೆ ಯಾವ ಬೆಳೆಯಿಂದ ಅನುಕೂಲವಾಗಲಿದೆ ಎನ್ನುವುದರ ಕುರಿತು ಅಧ್ಯಯನ ನಡೆಸಬೇಕು. ಕೃಷಿ ವಿವಿ ಗಳಿಂದ ಎಷ್ಟು ಪದವೀದರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದರು. 

ಮುಖ್ಯ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕರಾದ ಡಾ.ಎ.ಚಂದ್ರಪ್ಪ, ಚಿತ್ರದುರ್ಗದ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಹೊಸದುರ್ಗ ಶಾಸಕರಾದ ಬಿ.ಜೆ.ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ,ಮಾಜಿ ಲೋಕಸಭಾ ಸದಸ್ಯರಾದ ಎಂ.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ , ಕೃಷಿ ತಜ್ಞ ಏಕಾಂತಯ್ಯ, ಸೇರಿದಂತೆ ಹತ್ತಾರು ಮಂದಿ ಪ್ರಗತಿಪರ ರೈತರು ಮತ್ತು ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು‌ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com