ಹುತಾತ್ಮ ಪೊಲೀಸರ ಸಮೂಹ ವಿಮೆ ಮೊತ್ತ 20 ಲಕ್ಷದಿಂದ 50 ಲಕ್ಷ ರೂ. ಗೆ ಏರಿಕೆ: ಸಿಎಂ ಸಿದ್ದರಾಮಯ್ಯ

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಸಮೂಹ ವಿಮೆ ಮೊತ್ತವನ್ನು 20 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸಿದ್ದಾರೆ.
ಬೆಂಗಳೂರಿನ ಸಿಎಆರ್ ಪ್ರಧಾನ ಕಚೇರಿಯ ಆವರಣದಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ 'ಪೊಲೀಸ್ ಸಂಸ್ಮರಣ ದಿನ'ದ ಹಿನ್ನೆಲೆ ಹುತಾತ್ಮ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ್ ಗೌರವ ನಮನ ಸಲ್ಲಿಸಿದರು
ಬೆಂಗಳೂರಿನ ಸಿಎಆರ್ ಪ್ರಧಾನ ಕಚೇರಿಯ ಆವರಣದಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ 'ಪೊಲೀಸ್ ಸಂಸ್ಮರಣ ದಿನ'ದ ಹಿನ್ನೆಲೆ ಹುತಾತ್ಮ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ್ ಗೌರವ ನಮನ ಸಲ್ಲಿಸಿದರು
Updated on

ಬೆಂಗಳೂರು: ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಸಮೂಹ ವಿಮೆ ಮೊತ್ತವನ್ನು 20 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು.

ಪೊಲೀಸ್ ವ್ಯವಸ್ಥೆಯು ರಾಜ್ಯ ಮತ್ತು ಸರ್ಕಾರದ ಘನತೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ನಡುವೆ ನೇರ ಸಂಬಂಧವಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದಾಗ ಹೆಚ್ಚಿನ ಬಂಡವಾಳ ಹೂಡಿಕೆಯಾಗುತ್ತದೆ ಎಂದು ಹೇಳಿದರು. 

ಇದು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಪರಿಣಾಮವಾಗಿ, ದೇಶದ ಜನರ ತಲಾ ಆದಾಯವೂ ಹೆಚ್ಚಾಗುತ್ತದೆ. ದೇಶದ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಕಾಪಾಡಬೇಕು ಎಂದು ಕರೆ ನೀಡಿದರು.

ತಂತ್ರಜ್ಞಾನದ ಪ್ರಗತಿಯಿಂದ ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿದ್ದು, ಸೈಬರ್ ತಂತ್ರಜ್ಞಾನದ ಜತೆಗೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ, ಇದನ್ನು ಪರಿಣಾಮಕಾರಿಯಾಗಿ ತಡೆಯಬೇಕು ಎಂದು ಸೂಚನೆ ನೀಡಿದರು.

ಸುಳ್ಳು ಸುದ್ದಿಗಳು ಅಶಾಂತಿಯನ್ನು ಸೃಷ್ಟಿಸುತ್ತಿವೆ: ಎಲ್ಲ ಜನರನ್ನು ಸಮಾನವಾಗಿ ಕಾಣುವುದು ಮತ್ತು ನೋಡುವುದು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸುಳ್ಳು ಮತ್ತು ದ್ವೇಷಪೂರಿತ ಸುದ್ದಿಗಳು ದೇಶದ ಬೆಳವಣಿಗೆಗೆ ಹಾನಿಕಾರಕವಾಗಿದೆ, ಅಶಾಂತಿಯ ಪರಿಣಾಮವಾಗಿ ಜನರ ತಲಾ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಕಲಿ ಸುದ್ದಿಗಳನ್ನು ಹರಡುವ ವೆಬ್‌ಸೈಟ್‌ಗಳು ಮತ್ತು ಅವುಗಳನ್ನು ನಿರ್ವಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ. ಹೊಸ ವಾಹನ ಖರೀದಿಗೆ 100 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದರು.

2125 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಪೊಲೀಸ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ ಎಂದರು.

ನಿವೃತ್ತ ಸಿಬ್ಬಂದಿಯ ಆರೋಗ್ಯ ಮತ್ತು ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇರಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ ಏಳು ಜಿಲ್ಲೆಗಳಲ್ಲಿ ಏಳು ಪೊಲೀಸ್ ಸಾರ್ವಜನಿಕ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಪೊಲೀಸ್ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. 

ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಪೊಲೀಸ್ ಇಲಾಖೆ ಮುಖ್ಯಸ್ಥರು ಪುಷ್ಪ ನಮನ ಸಲ್ಲಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com