ಬೆಂಗಳೂರು: ಹವಾಮಾನ ಬದಲಾವಣೆ ಮತ್ತು ನೈತಿಕ ಮೌಲ್ಯಗಳ ಪಾಲನೆ ದೊಡ್ಡ ಸವಾಲಾಗಿದ್ದು, ನೈತಿಕತೆ ಇಲ್ಲದ ಯಶಸ್ಸು, ದುಡಿಮೆ ಇಲ್ಲದ ಸಂಪತ್ತು ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಪ್ರಯೋಜಕ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ-ಬಿ)ನ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಸ್ಥಾಪನಾ ಸಪ್ತಾಹಕ್ಕೆ ಉದ್ಘಾಟಿಸಿ ಮಾತನಾಡಿದ ಮುರ್ಮು, ಐಐಎಂ-ಬಿ ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ಮತ್ತು ದೇಶದಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
IIM-B ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕ ಮನ್ನಣೆ ಪಡೆದುಕೊಂಡಿದೆ. ಈ ಸಂಸ್ಥೆಯು ವೃತ್ತಿಪರರಲ್ಲಿ ಕೌಶಲ್ಯ ಮತ್ತು ಅಂತರಂಗದ ಬೆಳವಣಿಗೆಗೂ ಮಾರ್ಗದರ್ಶನ ನೀಡುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
"ನೀವು ಡಿಜಿಟಲ್ ವಿಭಜನೆಗೆ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಮಹಾತ್ಮ ಗಾಂಧೀಜಿ ಅವರು ಬೋಧಿಸಿದ ನೈತಿಕತೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ಭವಿಷ್ಯದ ಸಂಪತ್ತು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಐಐಎಂನಂತಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನೂ ಪಾಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement