ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ: ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ ವಾಪಸ್

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಇಂದು ನಡೆಸುತ್ತಿದ್ದ ಬೆಂಗಳೂರು ಬಂದ್ ಅನ್ನು ಹಿಂಪಡೆದುಕೊಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಇಂದು ನಡೆಸುತ್ತಿದ್ದ ಬೆಂಗಳೂರು ಬಂದ್ ಅನ್ನು ಹಿಂಪಡೆದುಕೊಂಡಿದೆ. 

ಆಟೋ, ಕ್ಯಾಬ್, ಸೇರಿದಂತೆ ಸಾವಿರಾರು ಖಾಸಗಿ ವಾಹನಗಳು ಇಂದು ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಕೆಲವೆಡೆ ಪ್ರಯಾಣಿಕರು ಪರದಾಡುವಂತಾಯಿತು. ಖಾಸಗಿ ಸಾರಿಗೆ ಒಕ್ಕೂಟಗಳು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಭೇಟಿ ನೀಡಿ ಹೋರಾಟ ನಿರತರ ಮನವಿಯನ್ನು ಆಲಿಸಿದರು. ನಂತರ ತಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್ ಅನ್ನು​​ ಹಿಂಪಡೆದಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಖಾಸಗಿ ಸಾರಿಗೆ ಒಕ್ಕೂಟಕ್ಕೆ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ. ಮತ್ತೆ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ. ನಾನು ಖಾಸಗಿ ಸಾರಿಗೆಯವರ ಪರ ಇದ್ದೇನೆ. ರಾಜ್ಯದಲ್ಲಿ ಯಾವುದೇ ಅನುಮತಿ ಇಲ್ಲದೆ ಬೈಕ್​ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಸಿಎಂ ಸಿದ್ದರಾಮಯ್ಯ ಜೊತೆಗೆ ಸಭೆ ಮಾಡುತ್ತೇನೆ. ವಸತಿ ನೀಡುವ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಮತ್ತೊಮ್ಮೆ ಚರ್ಚಿಸುತ್ತೇನೆ. ಖಾಸಗಿ ಬಸ್​ ಮಾಲೀಕರ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಜತೆ ಚರ್ಚಿಸುತ್ತೇನೆ. ಕಾನೂನು ಬಾಹಿರವಾಗಿ ಗೂಡ್ಸ್​ ವಾಹನ ಓಡಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಓಲಾ, ಉಬರ್, ರಾಪಿಡೊ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಒಂದು ನಗರ, ಒಂದು ದರ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 17 ಕೋಟಿ ರೂ. ಅನುದಾನ ಇಡಲಿದ್ದೇವೆ. ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಆಗಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com