ಗೌರವ ವಂದನೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
ಗೌರವ ವಂದನೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆ ಸರಿ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ ಹಾಗೂ ಡಿಸಿಪಿಗಳನ್ನು ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಬೆಂಗಳೂರು: ಕಾನೂನು ಸುವ್ಯವಸ್ಥೆ ಸರಿ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ ಹಾಗೂ ಡಿಸಿಪಿಗಳನ್ನು ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ಯಾವುದೇ ವ್ಯಕ್ತಿ ಪೊಲೀಸ್ ಠಾಣೆಗೆ ಬಂದರೆ ಆ ವ್ಯಕ್ತಿಗೆ ಧೈರ್ಯ ತುಂಬಿ ನ್ಯಾಯ ಕೊಡಿಸಬೇಕು. ಅನೇಕ ನಗರಗಳಲ್ಲಿ ರೌಡಿಗಳಿದ್ದಾರೆ. ಕಳ್ಳರಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸುವವರಿದ್ದಾರೆ, ಇವೆಲ್ಲಕ್ಕೂ ಪೊಲೀಸರು ಕಡಿವಾಣ ಹಾಕಬೇಕು ಎಂದರು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯಗಳ, ಎಲ್ಲಾ ದೇಶಗಳ ಜನ ನೆಲೆಸಿದ್ದಾರೆ. ಅವರೆಲ್ಲರೂ ನೆಮ್ಮದಿಯಿಂದ, ಖುಷಿಯಿಂದ ಇರಬೇಕು. ದೂರು ಬಂದರೆ ಮಾತ್ರ ಎಫ್ಐಆರ್ ದಾಖಲಿಸಬೇಕು ಎನ್ನುವ ಮನಸ್ಥಿತಿ ಬಿಟ್ಟುಬಿಡಿ. ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದರೆ ಪೊಲೀಸ್ ವ್ಯವಸ್ಥೆಗೆ ಘನತೆ ಬರುತ್ತದೆ. ಅಪರಾಧ ಜಗತ್ತಿಗೆ ಭಯವೂ ಮೂಡುತ್ತದೆ ಎಂದರು.

ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆದರೆ ಡಿಸಿಪಿ, ಎಸ್‍ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಖಡಕ್ ಎಚ್ಚರಿಕೆ ನೀಡಿದರು.

ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದರೆ, ಜನಸ್ನೇಹಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಿಸಿಬಿಯನ್ನು ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಾದರೆ ಹೊಸ ಕಟ್ಟಡಗಳನ್ನು ಒದಗಿಸಲಾಗುವುದು ಎಂದರು.

Related Stories

No stories found.

Advertisement

X
Kannada Prabha
www.kannadaprabha.com