ಬೆಳಗಾವಿಯಲ್ಲಿ ಅದ್ದೂರಿ ಗಣೇಶೋತ್ಸವ, ಈದ್ ಮೆರವಣಿಗೆ ಮುಂದೂಡಿಕೆ!
ಸೋಮವಾರ ನಾಡಿನಾದ್ಯಂತ ವಿಘ್ನ ನಿವಾರಕನನ್ನು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡು ಸಂಭ್ರಮದಿಂದ ಆಚರಿಸಲಾಯಿತು. ಇನ್ನೂ 10 ದಿನಗಳ ಕಾಲ ಗಣೇಶೋತ್ಸವ ಜೋರಾಗಿರುತ್ತದೆ.
Published: 19th September 2023 12:38 AM | Last Updated: 19th September 2023 03:22 PM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ಸೋಮವಾರ ನಾಡಿನಾದ್ಯಂತ ವಿಘ್ನ ನಿವಾರಕನನ್ನು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡು ಸಂಭ್ರಮದಿಂದ ಆಚರಿಸಲಾಯಿತು. ಇನ್ನೂ 10 ದಿನಗಳ ಕಾಲ ಗಣೇಶೋತ್ಸವ ಜೋರಾಗಿರುತ್ತದೆ. ಬೆಂಗಳೂರು, ಕರಾವಳಿ ಪ್ರದೇಶ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲೆಡೆ ಬೃಹತ್ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಲಾಗಿದೆ. ಕಳೆದೆರಡು ವರ್ಷ ಚೌತಿ ಮೇಲೆ ಕೋವಿಡ್ -19 ನಿರ್ಬಂಧಗಳಿದ್ದವು. ಇದೀಗ ಕೊರೊನಾ ಉಪಟಳವಿಲ್ಲ. ಹೀಗಾಗಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.
ಬೆಳಗಾವಿಯಲ್ಲಿ ಗಣೇಶ ನಿಮಜ್ಜನೆ ಮೆರವಣಿಗೆಗೆ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂರು ಮುಂದೂಡಿದ್ದಾರೆ. 119 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವೈಭವದ ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡು ಸಂತಸದಿಂದ ಚೌತಿ ಆಚರಿಸಲು ಉತ್ಸುಕರಾಗಿದ್ದಾರೆ.
ಈ ಬಾರಿ ಸೆಪ್ಟೆಂಬರ್ 28 ರಂದು ಗಣೇಶ ನಿಮಜ್ಜನಾ ಮೆರವಣಿಗೆ ದಿನವೇ ಈದ್ ಮಿಲಾದ್ ಹಬ್ಬ ಬಂದಿದೆ. ಆ ದಿನ ಅವರೂ ಕೂಡಾ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಸುತ್ತಾರೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮುಸ್ಲಿಂ ಧರ್ಮಗುರುಗಳು , ಅಂಜುಮನ್ -ಏ-ಇಸ್ಲಾಂ ಸಂಸ್ಥೆಯವರು ಸಭೆ ನಡೆಸಿ ತಮ್ಮ ಹಬ್ಬವನ್ನು ಅಕ್ಟೋಬರ್ 1 ರಂದು ಆಚರಿಸಲು ನಿರ್ಧರಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅಂಜುಮನ್ -ಏ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ ಎಲ್ಲ ಜಮಾತ್ ಧರ್ಮಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈದ್ ಮಿಲಾದ್ ಮುಂದೂಡಲಾಗಿದೆ. ಗಣೇಶೋತ್ಸವ ಮೆರವಣಿಗೆಗೆ ನಾವು ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ಮಾತನಾಡಿ, ಮುಸ್ಲಿಂ ಬಾಂಧವರು ಕೈಗೊಂಡಿರುವುದು ಐತಿಹಾಸಿಕ ನಿರ್ಧಾರ. ಎರಡು ಸಮಾಜದವರು ಒಗ್ಗಟ್ಟಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ನಗರದಲ್ಲಿ ಅತಿದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಮತ್ತು ವಿಗ್ರಹದ ನಿಮಜ್ಜನದ ಸಮಯದಲ್ಲಿ ಸುಮಾರು ಒಂದು ಲಕ್ಷ ಜನರು ಮೆರವಣಿಗೆಗೆ ಸೇರುತ್ತಾರೆ. ಕಳೆದ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಘರ್ಷಣೆಯಿಂದಾಗಿ ಈ ಬಾರಿ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ.