ನಮ್ಮಲ್ಲೇ ನೀರು ಇಲ್ಲದಿರುವಾಗ ತಮಿಳು ನಾಡಿಗೆ ಬಿಡುವುದು ಹೇಗೆ?, ಸೆ.21ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ: ಸಿಎಂ ಸಿದ್ದರಾಮಯ್ಯ
ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ನಡುವೆ ತಮಿಳು ನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಇಂದು ಬುಧವಾರ ರಾಜ್ಯದ ಸರ್ವಪಕ್ಷಗಳ ಸಂಸದರು, ಕೇಂದ್ರ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟು ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರು ಇಲ್ಲ. 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕಳೆದ 123 ವರ್ಷಗಳಲ್ಲಿ ಎಂದೂ ಇಷ್ಟು ಮಳೆ ಕೊರತೆ ಆಗಿರಲಿಲ್ಲ. ಕಾವೇರಿ ನೀರಿನ ಬಗ್ಗೆ ಹಿಂದೆ ಸುಪ್ರೀಂಕೋರ್ಟ್ ಆದೇಶ ಇದೆ. ರಾಜ್ಯದ ಕಾವೇರಿ ನದಿ ನೀರು ವಿಚಾರದಲ್ಲಿ ಸಂಕಷ್ಟ ಸೂತ್ರ ಅಗತ್ಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಷ್ಟು ನೀರು ಬಿಡಬೇಕೆಂದು ತಿಳಿಸಿಲ್ಲ. ಸಂಕಷ್ಟದ ಸೂತ್ರ ಏನು ಎಂಬುದು ತಯಾರಿಯಾಗಿಲ್ಲ ಎಂದರು.
ಮಳೆ ಸಾಮಾನ್ಯವಾಗಿದ್ದರೆ 108 ಟಿಎಂಸಿ ನಾವು ಕೊಡಬೇಕಿತ್ತು. ಮುಂದೆ ಮಳೆ ಬರುವ ಆಶಾದಾಯಕವಾಗಿಲ್ಲ. ಮಳೆ ಕೊರತೆಯಿಂದ ನಾವು ಕಷ್ಟದಲ್ಲಿ ಇದ್ದೇವೆ. ಎರಡೂ ರಾಜ್ಯಗಳ ನಾಯಕರನ್ನು ಪ್ರಧಾನಿ ಕರೆದು ಮಾತಾಡಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿಗೆ ಸಮಯ ಕೇಳಲಾಗಿದೆ. ನಾಳೆ ಸುಪ್ರೀಂ ಕೋರ್ಟ್ಗೆ ನೀರು ಇಲ್ಲವೆಂದು ಅರ್ಜಿ ಹಾಕುತ್ತೇವೆ ಎಂದರು.
ತಮಿಳು ನಾಡಿಗೆ ನೀರು ಬಿಡಬಾರದು ಎಂಬ ದುರುದ್ದೇಶ ನಮಗಿಲ್ಲ, ಆದರೆ ಈ ಬಾರಿ ನಮಗೇ ನೀರು ಇಲ್ಲ, ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲ ಒಂದೇ ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದರು.
ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ: ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಮತ್ತು ಪ್ರಧಾನಿ ಮೋದಿಯವರಿಗೂ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಪ್ರಧಾನಿಯವರು ಎರಡೂ ರಾಜ್ಯಗಳನ್ನು ಕರೆದು ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದರು.
ತಮಿಳು ನಾಡಿನವರು ನಾವು ಮಾತುಕತೆಗೆ ಕರೆದರೆ ಬರುವುದಿಲ್ಲ. ಹೀಗಾಗಿ ಪ್ರಧಾನಿಯವರು ಎರಡೂ ರಾಜ್ಯಗಳ ಮುಖ್ಯಸ್ಥರನ್ನು ಕರೆದು ಮಾತನಾಡಿ ವಿವಾದ ಬಗೆಹರಿಸಬೇಕು. ನಾವು ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ