ವೈಯಾಲಿಕಾವಲ್ ಪೊಲೀಸರಿಂದ ದೌರ್ಜನ್ಯ, ಚಿತ್ರಹಿಂಸೆ: ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ
ವೈಯಾಲಿಕಾವಲ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಐವರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
Published: 21st September 2023 12:04 PM | Last Updated: 21st September 2023 02:32 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವೈಯಾಲಿಕಾವಲ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಐವರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ರಘುವನಹಳ್ಳಿಯ ವಿ. ನಾಗರಾಜು ಆತ್ಮಹತ್ಯೆಗೆ ಶರಣಾದವರು. ಸಾವಿಗೂ ಮುನ್ನ ನಾಗರಾಜು ಬರೆದಿಟ್ಟಿರುವ ಎರಡು ಪುಟಗಳ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಸನಾವುಲ್ಲಾ, ನಟರಾಜು, ಎಂ.ಸಿ ಈರೇಗೌಡ, ವೈಯಾಲಿಕಾವಲ್ ಠಾಣೆ ಇನ್ಸ್‌ಪೆಕ್ಟರ್, ಹೆಣ್ಣೂರು ಠಾಣೆ ಸಿಬ್ಬಂದಿ ಶಿವಕುಮಾರ್ ಕಾರಣ ಎಂದು ಆರೋಪಿಸಿದ್ದಾರೆ.
ಡೆತ್‌ನೋಟ್ ಹಾಗೂ ನಾಗರಾಜು ಪತ್ನಿ ವಿನುತಾ ನೀಡಿರುವ ದೂರು ಆಧರಿಸಿ ಐವರ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಮೂಲಗಳು ಹೇಳಿವೆ.
ಮೃತ ನಾಗರಾಜು, ಪೀಣ್ಯ ನಿವಾಸಿ ಸನಾವುಲ್ಲಾ ಅವರ ಕಂಪನಿಯಲ್ಲಿ ಡಾಕ್ಯುಮೆಂಟ್ ವೆರಿಫಿಕೇಶನ್ ಕೆಲಸ ಮಾಡಿಕೊಂಡಿದ್ದರು. ಉದ್ಯಮಿ ಸನಾವುಲ್ಲಾ ಸಾಕಷ್ಟು ಮಂದಿಗೆ ಹಣ ವಂಚಿಸಿದ್ದು, ನನ್ನ ಮೇಲೆ ಆರೋಪ ಹೊರಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟರಾಜು ಎಂಬವರು ವೈಯಾಲಿಕಾವಲ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಜೂನ್ 19ರಂದು ಠಾಣೆಗೆ ಕರೆಸಲಾಗಿತ್ತು. ಠಾಣೆಯಲ್ಲಿ ಬ್ಯಾಟ್, ಶೂ, ಬೆಲ್ಟ್‌ನಿಂದ ಥಳಿಸಿ ದೌರ್ಜನ್ಯ ಎಸಗಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಪತ್ನಿ ಮೇಲೆ ಕೋಪ, ನಾಲ್ಕು ತಿಂಗಳ ಹಸುಗೂಸನ್ನು ರಸ್ತೆಗೆ ಎಸೆದು ಕೊಂದ ತಂದೆ
ಈ ಹಿಂದೆ ಯಾವುದೇ ವಿಚಾರಣೆ ಇಲ್ಲದೆ ಜೂನ್ 1ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ದೌರ್ಜನ್ಯ ಎಸಗಿದ್ದರು. ಜತೆಗೆ, ಶಿವಕುಮಾರ್ ಹೆಸರಿನ ಪೊಲೀಸ್ ಎಂಟು ಲಕ್ಷ ರೂ.ಗಳನ್ನು ಪಡೆದಿದ್ದರು. ಈ ಹಣವನ್ನು ಸಾಲ ಮಾಡಿ ಅವರಿಗೆ ಕೊಟ್ಟಿದ್ದೆ ಎಂದು ನಾಗರಾಜು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಾಗರಾಜು ಅವರ ಪತ್ನಿ ವಿನುತಾ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಬುಧವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಅವರ 14 ವರ್ಷದ ಮಗ ಶಾಲೆಗೆ ತೆರಳಿದ್ದು ನಾಗರಾಜು ಒಬ್ಬರೇ ಮನೆಯಲ್ಲಿ ಉಳಿದಿದ್ದರು. ಬೆಳಗ್ಗೆ 10.5ರ ಸುಮಾರಿಗೆ ಪತಿ ನಾಗರಾಜು ಪತ್ನಿಗೆ ಸಂದೇಶ ಕಳಿಸಿ, ''ದಯವಿಟ್ಟು ನನ್ನನ್ನು ಕ್ಷಮಿಸು. ಮಗನನ್ನು ಚೆನ್ನಾಗಿ ನೋಡಿಕೋ'' ಎಂದಿದ್ದರು.
ಜತೆಗೆ ಡೆತ್‌ನೋಟ್ ಕೂಡ ಕಳಿಸಿದ್ದರು. ಇದರಿಂದ ಆತಂಕಗೊಂಡು ಮನೆಗೆ ಬಂದು ನೋಡುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಿನುತಾ ದೂರಿನಲ್ಲಿ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.