
ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಬೆಂಗಳೂರು ಬಂದ್ ಗೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಬೆಂಬಲ ಘೋಷಿಸಿದ್ದಾರೆ.
ಬಂದ್ ಯಶಸ್ವಿಯಾಗಲು ಬಿಜೆಪಿ ಪಕ್ಷ ಸಹಕರಿಸುವುದಾಗಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಸಿಡಬ್ಲ್ಯುಎ, ಸಿಡಬ್ಲ್ಯುಆರ್ ಸಿ ಆದೇಶ ಪಾಲನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮಿಳುನಾಡಿನ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಸಹ ಬೆಂಗಳೂರು ಬಂದ್ ಗೆ ಬೆಂಬಲಿಸಿದೆ. ಸೆ.27 ರಂದು ಬಿಜೆಪಿ ಆಯೋಜಿಸಿರುವ ಪ್ರತಿಭಟನೆಯಲ್ಲಿಯೂ ಜೆಡಿಎಸ್ ಭಾಗಿಯಾಗಲಿದೆ.
ಇದನ್ನೂ ಓದಿ: ಕಾವೇರಿ ವಿವಾದ: ಬಿಜೆಪಿ-ಜೆಡಿಎಸ್ ನಿಂದ ರಾಜಕೀಯ- ಸಿಎಂ ಸಿದ್ದರಾಮಯ್ಯ
ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಸಂಘಗಳು ಮತ್ತು ಇತರ ಸಂಘಟನೆಗಳ ಛತ್ರದ ಸಂಘಟನೆಯಾದ 'ಕರ್ನಾಟಕ ಜಲ ಸಂರಕ್ಷಣಾ ಸಮಿತಿ' ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿವೆ.
'ಕಾವೇರಿ ಜಲವಿವಾದದ ಕುರಿತು ನಾವು ವಿಸ್ತೃತ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ನಾಳೆ ಬೆಂಗಳೂರು ಬಂದ್ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಬೇಕು. ಯಾವುದೇ ಭಿನ್ನ ಹೇಳಿಕೆಗಳನ್ನು ನೀಡದೆ ನಾಳೆ ಹೋಟೆಲ್ ಮತ್ತು ಅಂಗಡಿ ಮಾಲೀಕರು ಮತ್ತು ಸಂಘಟನೆಗಳು ತಮ್ಮ ಸಂಸ್ಥೆಗಳನ್ನು ಮುಚ್ಚುವಂತೆ ನಾನು ಮನವಿ ಮಾಡುತ್ತೇನೆ. -ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಬೆಂಗಳೂರಿನ ಹೋರಾಟಕ್ಕೆ ಬೆಂಬಲ ನೀಡುವುದಾಗಿ" ಯಡಿಯೂರಪ್ಪ ಹೇಳಿದ್ದಾರೆ.