'ಕಾವೇರಿ'ಗಾಗಿ ಬೆಂಗಳೂರು ಬಂದ್: ತಮಿಳುನಾಡು ಬಸ್ ಸೇವೆಗೆ ಅಡ್ಡಿ, ಪ್ರಯಾಣಿಕರು, ಐಟಿ ಉದ್ಯೋಗಿಗಳಿಗೆ ತೊಂದರೆ!

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ನಡೆಸುತ್ತಿರುವ 'ಬೆಂಗಳೂರು ಬಂದ್' ಹಿನ್ನೆಲೆಯಲ್ಲಿ ತಮಿಳುನಾಡು - ಕರ್ನಾಟಕ ನಡುವಿನ ಬಸ್ ಸೇವೆಗೆ ಅಡ್ಡಿಯಾಗಿದೆ. ತಮಿಳುನಾಡಿನ ಹಲವಾರು ಬಸ್‌ಗಳನ್ನು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಜುಜುವಾಡಿಯಲ್ಲಿ ನಿಲ್ಲಿಸಲಾಗುತ್ತಿದೆ. 
ಕೆಎಸ್ ಆರ್ ಟಿಸಿ ಮತ್ತು ತಮಿಳುನಾಡು ಸಾರಿಗೆ ಸಂಸ್ಥೆ ಬಸ್
ಕೆಎಸ್ ಆರ್ ಟಿಸಿ ಮತ್ತು ತಮಿಳುನಾಡು ಸಾರಿಗೆ ಸಂಸ್ಥೆ ಬಸ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ನಡೆಸುತ್ತಿರುವ 'ಬೆಂಗಳೂರು ಬಂದ್' ಹಿನ್ನೆಲೆಯಲ್ಲಿ ತಮಿಳುನಾಡು - ಕರ್ನಾಟಕ ನಡುವಿನ ಬಸ್ ಸೇವೆಗೆ ಅಡ್ಡಿಯಾಗಿದೆ. ತಮಿಳುನಾಡಿನ ಹಲವಾರು ಬಸ್‌ಗಳನ್ನು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಜುಜುವಾಡಿಯಲ್ಲಿ ನಿಲ್ಲಿಸಲಾಗುತ್ತಿದೆ. 

ತಮಿಳುನಾಡಿನಿಂದ ಬರುವ ಬಸ್ ಗಳಿಗೆ ಗಡಿಭಾಗ ಅತ್ತಿಬೆಲೆಯಲ್ಲಿ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಬಸ್ ಮಾತ್ರವಲ್ಲದೇ, ತಮಿಳುನಾಡು ನೋಂದಣಿಯ ಎಲ್ಲಾ ವಾಹನಗಳಿಗೂ ರಾಜ್ಯದೊಳಗೆ ಪ್ರವೇಶ ನೀಡುತ್ತಿಲ್ಲ. ಇದರಿಂದಾಗಿ ಹಲವು ಪ್ರಯಾಣಿಕರು ಮತ್ತು ಐಟಿ ಉದ್ಯೋಗಿಗಳು ಪರದಾಡುವಂತಾಗಿದೆ.  ಬೆಂಗಳೂರಿನಲ್ಲಿ ಹಲವಾರು ಐಟಿ ಉದ್ಯಮಗಳಿವೆ, ಆದ್ದರಿಂದ ಅಲ್ಲಿ ಕೆಲಸ ಮಾಡುವ ಎಲ್ಲಾ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ  ಎಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ ಕರ್ನಾಟಕದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರೊಬ್ಬರು ಹೇಳಿದರು.

ಇತ್ತ ಬೆಂಗಳೂರಿನ ಸ್ಯಾಟ್ ಲೈಟ್ ನ ಬಸ್ ನಿಲ್ದಾಣ ಜನರಿಲ್ಲದೆ ಬಣಗುಡುತ್ತಿದೆ. ಈ ನಿಲ್ದಾಣದಿಂದಲೇ ಹೆಚ್ಚಿನ ಜನರು ತಮಿಳುನಾಡಿಗೆ ತೆರಳುತ್ತಿದ್ದರು. ಆದರೆ, ಇಂದು ಬಂದ್ ನಿಂದಾಗಿ ನಿತ್ಯ ಸಂಚರಿಸುತ್ತಿದ್ದ ತಮಿಳುನಾಡು ಬಸ್​ಗಳು ಬೆಂಗಳೂರು ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ತೆರಳಿವೆ. ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್​ಆರ್​​ಟಿಸಿ ಸಂಚಾರ ನಡೆಸಿವೆ. ನಗರದ ಹೃದಯ ಭಾಗ ಮೆಜೆಸ್ಟಿಕ್​ನಿಂದ ಬಿಎಂಟಿಸಿ ಬಸ್​ಗಳು ಸಂಚರಿಸುತ್ತಿದ್ದರೆ, ಕೆಎಸ್​ಆರ್​ಟಿಸಿ ಬಸ್​ಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಿವೆ. ಇನ್ನು ಆಟೋ ಹಾಗೂ ಕ್ಯಾಬ್​ಗಳು ಓಡಾಡುತ್ತಿವೆ.

ತಮಿಳು ಭಾಷಿಕರು ವಾಸಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ: ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ತಮಿಳು ಭಾಷಿಕರು ಹೆಚ್ಚಾಗಿ ವಾಸಿಸುತ್ತಿರುವ ವೈಟ್ ಫೀಲ್ಡ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಕೇಂದ್ರ ಡಿಸಿಪಿ ಟಿ ತೆಕ್ಕಣ್ಣನವರ್, ಸೂಕ್ತ ಬಂದೋಬಸ್ತ್ ಮಾಡಿದ್ದೇವೆ. ಆಯುಕ್ತರ ಆದೇಶದಂತೆ ಯಾವುದೇ ಪ್ರತಿಭಟನೆ, ಮೆರವಣಿಗೆಗೆ ಅವಕಾಶವಿಲ್ಲ. ಸಂಚಾರ ಸಾಮಾನ್ಯವಾಗಿದೆ ಎಂದು ತಿಳಿಸಿದರು. 

ಅತ್ತಿಬೆಲೆ ಗಡಿಯಲ್ಲಿ ಪೊಲೀಸರ ಸರ್ಪಗಾವಲು:  ತಮಿಳುನಾಡು ಗಡಿ ಗೋಪುರದ ಬಳಿ ಹೆಚ್ಚಿನ ಸಂಖ್ಯೆಯ ಪೋಲೀಸರ‌ ನಿಯೋಜನೆ ಮಾಡಲಾಗಿದೆ. ಮೊನ್ನೆ ಇದೇ ಸ್ಥಳದಲ್ಲಿ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮಕ್ಕೆ ಮುಂದಾಗಿರೋ ಪೋಲೀಸರು, ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com