
ವಾಷಿಂಗ್ಟನ್ ಡಿಸಿ: ಅಮೆರಿಕ ಪ್ರವಾಸದಲ್ಲಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ನೇತೃತ್ವದ ನಿಯೋಗವು ಮಂಗಳವಾರ ಐಎಂಎಫ್(ಅಂತರರಾಷ್ಟ್ರೀಯ ಹಣಕಾಸು ನಿಧಿ) ಜೊತೆ ಮಹತ್ವದ ಮಾತುಕತೆ ನಡೆಸಿತು. ಜಾಗತಿಕ ಕಂಪನಿಗಳು ಅನುಸರಿಸುತ್ತಿರುವ "ಚೀನಾ + ಒನ್" ಕಾರ್ಯಾಚರಣೆ ತಂತ್ರದ ಸದುಪಯೋಗ ಪಡೆಯಲು ಕರ್ನಾಟಕಕ್ಕೆ ಇರುವ ಅನುಕೂಲತೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಮತ್ತಿತರರು ಪಾಲ್ಗೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಬೆಳವಣಿಗೆ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಯನ್ನೂ ನಡೆಸಲಾಯಿತು.
ಪ್ರಮುಖ ಎಂ ಎನ್ ಸಿ ಕಂಪನಿಗಳು ಚೀನಾದಲ್ಲಿ ತಾವು ಹೊಂದಿರುವ ತಯಾರಿಕಾ ಘಟಕದ ಜೊತೆಗೆ ಬೇರೆ ದೇಶದಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ(ಚೀನಾ + ಒನ್ ನೀತಿ). ಈ ಸಂಬಂಧ ಭಾರತವು ಜಾಗತಿಕ ಕಂಪನಿಗಳ ಗಮನ ಸೆಳೆದಿದ್ದು, ಕರ್ನಾಟಕವು ಆಯಕಟ್ಟಿನ ಸ್ಥಳವಾಗಿದೆ ಎಂದು ಎಂಬಿ ಪಾಟೀಲ್ ಅವರು ಸಭೆಯ ಗಮನ ಸೆಳೆದರು.
ಇದೆ ವೇಳೆ, ಬೆಂಗಳೂರಿಗೆ ಹೆಚ್ಚಿನ ಹೂಡಿಕೆಯನ್ನು ಸೆಳೆಯುವ ನಿಟ್ಟಿನಲ್ಲಿ ನಗರದ ದಟ್ಟಣೆಯನ್ನು ತಗ್ಗಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಮುಂಚೂಣಿ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಜೊತೆ ನಡೆದ ಸಭೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರಗಳ ಸ್ಥಾಪನೆ, ಪೈಲಟ್ ಹಾಗೂ ವಿಮಾನ ಸಿಬ್ಬಂದಿ ತರಬೇತಿ ಕ್ಷೇತ್ರದಲ್ಲಿ ಇರುವ ಹೂಡಿಕೆ ಅವಕಾಶಗಳ ಬಗ್ಗೆ ಗಮನ ಸೆಳೆಯಲಾಯಿತು.
ಯುಎಸ್ಐಎಸ್ ಪಿಎಫ್ (ಯುಎಸ್- ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ) ಜೊತೆ ನಡೆದ ಸಭೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ನಿರ್ಮಾಣವಾಗಲಿರುವ ಆರೋಗ್ಯ ತಂತ್ರಜ್ಞಾನ ಪಾರ್ಕ್ ನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಅವಲೋಕಿಸಲಾಯಿತು.
ಯುಎಸ್ಐಎಸ್ ಪಿಎಫ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಎಂಬಿ ಪಾಟೀಲ ಅವರು, ಇ-ಆಡಳಿತ ಮತ್ತು ಸ್ಥಳೀಯ ಸಂಸ್ಥೆ ಗಳ ಮುಂದಿರುವ ಕೆಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನದ ನೆರವು ಪಡೆಯಲು ಸಮರ್ಥ ಪಾಲುದಾರಿಕೆಗಾಗಿ ಶೋಧನೆ ನಡೆಸಲಾಗುವುದು ಎಂದರು.
ಬೋಯಿಂಗ್ ಉಪಾಧ್ಯಕ್ಷರಾದ ಗ್ರೆಟಾ ಲಂಡ್ ಬರ್ಗ್, ನಿರ್ದೇಶಕರಾದ ನಿಕೋಲ ಪೊರ್ರೆಕಾ, ಯುಎಸ್ಐ ಪಿಎಫ್ ಸಿಇಒ ಮುಕೇಶ್ ಅಘಿ, ಉಪಾಧ್ಯಕ್ಷರಾದ ಸೂಸನ್ ರಿಚಿ, ಜಿಇ ವೆರ್ನೋವಾ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಪಿಕ್ಯಾರ್ಟ್ ಮತ್ತಿತರರು ಸಭೆಯಲ್ಲಿ ಪಾಲ್ಕೊಂಡಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಅವರು ಸಹ ಸಭೆಲ್ಲಿದ್ದರು.
Advertisement