ಕೊಳವೆ ಬಾವಿ ದುರಂತ: ಸಾವು ಗೆದ್ದ ಸಾತ್ವಿಕ್‌. HDK, CN ಮಂಜುನಾಥ್ ನಾಮಪತ್ರ ಸಲ್ಲಿಕೆ. ಅಮಿತ್ ಶಾ ಭೇಟಿ ಆಗಿಲ್ಲ! - ಈ ದಿನದ ಸುದ್ದಿ ಮುಖ್ಯಾಂಶಗಳು: 04-04-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಕೊಳವೆ ಬಾವಿ ದುರಂತ: ಸಾವು ಗೆದ್ದ ಸಾತ್ವಿಕ್‌

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸ್ವಾತಿಕ್ ನನ್ನು ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿ NDRF ಹಾಗೂ SDRF ತಂಡಗಳು ಸುರಕ್ಷಿತವಾಗಿ ಹೊರತಂದಿದ್ದಾರೆ. ಮನೆ ಬಳಿ ಆಟವಾಡುತ್ತಿದ್ದ ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ನಿನ್ನೆ ಸಂಜೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದು ಸುಮಾರು 16 ಅಡಿ ಆಳದಲ್ಲಿ ಸಿಲುಕಿತ್ತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ SDRF ಮತ್ತು NDRF ತಂಡ ಇಂದು ಮಧ್ಯಾಹ್ನ 1.45ರ ಸುಮಾರಿಗೆ ಮಗುವನ್ನು ಜೀವಂತವಾಗಿ ಹೊರತಂದಿದ್ದಾರೆ. ಮಗು ಆರೋಗ್ಯವಾಗಿದ್ದರೂ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸಿಸಿದ್ದಾರೆ.

2. HDK, CN ಮಂಜುನಾಥ್ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದರಿಂದ ಹಲವು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಬೆಂ. ಗ್ರಾಮಾಂತರದಿಂದ ಅವರ ಸೋದರ ಮಾವ ಸಿಎನ್ ಮಂಜುನಾಥ್ , ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಇನ್ನುಳಿದಂತೆ ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಮುದ್ದಹನುಮೇಗೌಡ, ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೋಲಾರದಿಂದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಸಹ ಇಂದು ನಾಮಪತ್ರ ಸಲ್ಲಿಸಿದರು. 28 ಲೋಕಸಭಾ ಕ್ಷೇತ್ರಗಳ ಪೈಕಿ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

3. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿಗರ ವಿರುದ್ಧ ದೂರು

ಲೋಕಸಭೆ ಚುನಾವಣೆಯ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ MLC ಬಿಜಿ ಪಾಟೀಲ್, ಬಿಜೆಪಿ ನಗರ ಕಲಬುರಗಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಹಾಗೂ ಓರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿ ಅಧಿಕಾರಿ ಭೀಮರಾಯ ಗುರುಪಾದಪ್ಪ ಸಲ್ಲಿಸಿದ ದೂರಿನ ಆಧಾರದ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 30ರಂದು ನಡೆದ ಶರಣಬಸವೇಶ್ವರ ಜಾತ್ರೆ ನಿಮಿತ್ತ ಹಾಕಲಾಗಿದ್ದ ಬ್ಯಾನರ್ನಟಲ್ಲಿ ಬಿ.ಜಿ ಪಾಟೀಲ್, ಚಂದು ಪಾಟೀಲ್ ಹಾಗೂ ಇನ್ನಿತರ ನಾಯಕರ ಭಾವ ಚಿತ್ರಗಳನ್ನು ಹಾಕಿ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಈ ಮಧ್ಯೆ ಕರ್ನಾಟಕದಲ್ಲಿ ಮಾರ್ಚ್ 16ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ 1,205 ಪ್ರಕರಣಗಳನ್ನು ದಾಖಲಿಸಲಾಗಿದ್ದು, 26.68 ಕೋಟಿ ರೂಪಾಯಿ ನಗದು, 33 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

4. ಅಮಿತ್ ಶಾ ಭೇಟಿ ಆಗಿಲ್ಲ: ಈಶ್ವರಪ್ಪ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು, ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ದೆಹಲಿಗೆ ಬರುವಂತೆ ಈಶ್ವರಪ್ಪಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಹೋಗಿದ್ದ ಈಶ್ವರಪ್ಪಗೆ ಭೇಟಿಗೆ ಸಮಯ ನೀಡಲಾಗಿಲ್ಲ. ನಾನು ದೆಹಲಿಗೆ ಹೋಗದಿದ್ದರೆ ನನ್ನನ್ನು ದುರಹಂಕಾರಿ ಎಂದು ಭಾವಿಸುತ್ತಿದ್ದರು. ಹೀಗಾಗಿ ನಾನು ದೆಹಲಿಗೆ ಹೋದೆ. ಆದರೆ ನನಗೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

5. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ

ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಎಂಬವರನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಣ್ಣಪ್ಪ ಖೀಳೆಗಾಂವ್ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com