
ಮೈಸೂರು: ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಬುಡಕಟ್ಟು ಕುಗ್ರಾಮಗಳಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಇನ್ನೂ ವೇಗ ಪಡೆದುಕೊಂಡಿಲ್ಲ. ಏಕೆಂದರೆ ಈ ಜಿಲ್ಲೆಗಳಿಂದ ಗಿರಿಜನರು ಕೆಲಸ ಅರಸಿ ಬೇರೆಡೆಗೆ ವಲಸೆ ಹೋಗುತ್ತಿರುವುದರಿಂದ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕುಗ್ರಾಮಗಳಲ್ಲಿನ ಖಾಲಿ ಬೀದಿಗಳು ಮತ್ತು ಬೀಗ ಹಾಕಿದ ಮನೆಗಳು ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಸ್ವಾಗತಿಸುತ್ತವೆ. ಹೆಚ್ಚಿನ ಆದಿವಾಸಿಗಳು ಕೊಡಗು ಮತ್ತು ಕೇರಳದ ವಯನಾಡು ಜಿಲ್ಲೆಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳಿದ್ದಾರೆ.
ಕೆಲಸಕ್ಕೆ ತೆರಳಿದ ಆದಿವಾಸಿಗಳ ವೃದ್ಧ ಪೋಷಕರು ಮತ್ತು ಮಕ್ಕಳು ಮಾತ್ರ ಕುಗ್ರಾಮಗಳಲ್ಲಿ ಕಾಣಸಿಗುತ್ತಾರೆ. ಹನೂರು ಸಮೀಪದ ಹರದನರಿಪುರ, ಚಾಮರಾಜನಗರ ಜಿಲ್ಲೆಯ ಮುನೇಶ್ವರ ಕಾಲೋನಿ ಮತ್ತು ಶ್ರೀನಿವಾಸಪುರ ಕಾಲೋನಿ, ಬಿಳಿಗಿರಿ ರಂಗನ ಬೆಟ್ಟದ ಮೇಲಿನ ಕುಗ್ರಾಮಗಳು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಭಾಗಗಳನ್ನು ಪಕ್ಷಗಳು ನಿರ್ಲಕ್ಷಿಸಿದಂತಿದೆ. ಸ್ಥಳೀಯ ಕಂದಾಯ ಅಧಿಕಾರಿಗಳು ಕೂಡ ಚುನಾವಣೆ ಸಂಬಂಧಿತ ಕೆಲಸಗಳಿಗೆ ಈ ಸ್ಥಳಗಳಿಗೆ ಭೇಟಿ ನೀಡಿಲ್ಲ.
ಆದರೆ, ಆದಿವಾಸಿಗಳ ವಲಸೆಯಲ್ಲಿ ಹೊಸದೇನೂ ಇಲ್ಲ ಎನ್ನುತ್ತಾರೆ ಹಲವರು. ಅವರು ಸಾಮಾನ್ಯವಾಗಿ ಜನವರಿಯಿಂದ ಪ್ರಾರಂಭವಾಗುವ ಕಾಫಿ ಮತ್ತು ಮೆಣಸು ಕೊಯ್ಲು ಸಮಯದಲ್ಲಿ ಕೊಡಗು ಮತ್ತು ವಯನಾಡಿಗೆ ಹೋಗುತ್ತಾರೆ. ಈ ಸ್ಥಳಗಳಲ್ಲಿ ಕಾರ್ಮಿಕರ ತೀವ್ರ ಕೊರತೆಯೇ ಇದಕ್ಕೆ ಕಾರಣ. ಬುಡಕಟ್ಟು ಜನಾಂಗದವರು ಅಲ್ಲಿಗೆ ಹೋಗಿ ಹಣ ಸಂಪಾದಿಸಿ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ.
ಯುಗಾದಿ ಹಬ್ಬಕ್ಕೆ ಆದಿವಾಸಿಗಳು ತಮ್ಮ ಕುಗ್ರಾಮಗಳಿಗೆ ಮರಳುತ್ತಾರೆ ಎಂದು ನಿರೀಕ್ಷಿಸಿ, ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು ಅಲ್ಲಿ ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಲು ಯೋಜಿಸುತ್ತಿದ್ದಾರೆ. ಅವರು ಈಗ ವಲಸೆ ಕಾರ್ಮಿಕರ ವಿವರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಇದರಿಂದ ಅವರು ತಮ್ಮ ಹಳ್ಳಿಗಳಿಗೆ ಮರಳಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರೆ ಉಡುಗೊರೆಗಳನ್ನು ನೀಡುವ ಭರವಸೆ ನೀಡಿ ಕಾರ್ಮಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಆರಂಭಿಸಿದ್ದಾರೆ.
ಆದಾಯ, ಉದ್ಯೋಗ ಇಲ್ಲದೇ ಇದ್ದಾಗ ಹೆಚ್ಚಿನ ಆದಿವಾಸಿಗಳು ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಲು ಕೊಡಗಿಗೆ ವಲಸೆ ಹೋಗುತ್ತಾರೆ ಎಂದು ಆದಿವಾಸಿ ರಾಮು ತಿಳಿಸಿದ್ದಾರೆ. ಕುಗ್ರಾಮಗಳಲ್ಲಿ ವಾಸಿಸುವ ಜನರು ಇನ್ನೂ ಹಲವಾರು ಕಿಮೀಗಳವರೆಗೆ ಮೇಕ್-ಶಿಫ್ಟ್ ಸ್ಟ್ರೆಚರ್‌ಗಳಲ್ಲಿ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುತ್ತಾರೆ ಎಂದು ಎಂಎಂ ಹಿಲ್ಸ್‌ನಿಂದ ಬಂದಿರುವ ಮಾದೇಶ್ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಹಲವು ಕುಗ್ರಾಮಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಆದಿವಾಸಿಗಳು ಬಡತನದ ಕಾರಣದಿಂದ ಕೊಳ್ಳೇಗಾಲ ಅಥವಾ ನೆರೆಯ ತಮಿಳುನಾಡಿನ ಕೆಲವು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ ಎಂದು ಅವರು ಹೇಳಿದರು.
ಹಿಂದುಳಿದ ಜಿಲ್ಲೆಗಳಲ್ಲಿ ವಲಸೆ ದೊಡ್ಡ ಸಮಸ್ಯೆಯಾಗಿದೆ. ಹೆಚ್ಚಿನ ಗಿರಿಜನರು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿದ್ದರೂ, ಪ್ರಯೋಜನಗಳನ್ನು ಪಡೆಯುವಲ್ಲಿ ವಿಳಂಬವಾಗುತ್ತಿರುವ ಕಾರಣ ಅವರು ಬೇರೆಡೆಗೆ ವಲಸೆ ಹೋಗುತ್ತಾರೆ. ಸರಕಾರದಿಂದ ಉಚಿತ ಪಡಿತರ, ಪಿಂಚಣಿ ಮುಂತಾದ ಸವಲತ್ತುಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಹಲವರು ಮತದಾನಕ್ಕೆ ಬರುತ್ತಾರೆ ಎಂದು ಸಮಾಜ ಸೇವಕ ಮಲ್ಲೇಶಪ್ಪ ತಿಳಿಸಿದ್ದಾರೆ.
ಗಿರಿಜನರನ್ನು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ತಮ್ಮ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುಗಾದಿ ಹಬ್ಬಕ್ಕೆ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಮರಳುವಂತಾಗಲಿ ಎಂದು ಗಿರಿಜನ ಅಧಿಕಾರಿ ನವೀನ್ ಹೇಳಿದ್ದಾರೆ.
Advertisement