ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣೆ. ಶಿವಮೊಗ್ಗ ಬಿಜೆಪಿ ಘಟಕದ ಕಾರ್ಯದರ್ಶಿ NIA ವಶಕ್ಕೆ! - ಈ ದಿನದ ಸುದ್ದಿ ಮುಖ್ಯಾಂಶಗಳು: 05-04-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚಿ ಸಿಬ್ಬಂದಿ ರಕ್ಷಣೆ

ಬೆಂಗಳೂರಿನ ಆರ್.ಟಿ ನಗರದಲ್ಲಿನ ಮಿರಾಕಲ್ ಡ್ರಿಂಕ್ಸ್ ಮತ್ತು ಐಡಿಎಸ್ ಕಟ್ಟಡದ ನೆಲಮಹಡಿಯಲ್ಲಿನ ಐಟಿ ಕಂಪೆನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡು ನಂತರ ಮೇಲಿನ ಮಹಡಿಗೆ ವ್ಯಾಪಿಸಿತು. ಕಟ್ಟಡವಿಡೀ ಹೊಗೆ ತುಂಬಿಕೊಂಡಿದ್ದು ಹಲವರು ಸಿಲುಕಿಕೊಂಡಿದ್ದರು. ಐಟಿ ಕಂಪೆನಿಯ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಬಗ್ಗೆ ಮೊದಲೇ ತರಬೇತಿ ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಎಲ್ಲಾ ಸಿಬ್ಬಂದಿ ಕಟ್ಟಡದ ಮೇಲ್ಛಾವಣಿಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಆರ್.ಟಿ ನಗರ ಪೊಲೀಸರು ತೆರಳಿ ಕಟ್ಟಡದಲ್ಲಿದ್ದವರನ್ನು ರಕ್ಷಿಸಿದ್ದಾರೆ. ಅಗ್ನಿ ಅವಘಡದಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

2. ಕೋಟಾ ಶ್ರೀನಿವಾಸ್ ಗೆ ನೋಟಿಸ್, ಶೋಭಾ ವಿರುದ್ಧ ದೂರು

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 30ರಂದು ಕಟಪಾಡಿ ಖಾಸಗಿ ಕಾಲೇಜು ಆವರಣದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಪ್ರಚಾರ ಸಭೆ ನಡೆಸಿದ್ದ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೂ ಮೇ 27ರಂದು ಖುದ್ದಾಗಿ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ತಮ್ಮ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಮಲ್ಲೇಶ್ವರಂನಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಇಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

3. ಗೋಪಿನಾಥಂ ಜಲಾಶಯದಲ್ಲಿ ಮುಳುಗಿ ಮೂವರು ನೀರುಪಾಲು

ಚಾಮರಾಜನಗರದ ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿ ಮೂವರು ನೀರುಪಾಲಾದ ದಾರುಣ ಘಟನೆ ಇಂದು ನಡೆದಿದೆ. ಮೃತರನ್ನು ಪುದೂರು ಗ್ರಾಮದ ನಿವಾಸಿ ಮೀನಾ, ಪವಿತ್ರ ಮತ್ತು ಕೀರ್ತಿ ಎಂದು ಗುರುತಿಸಲಾಗಿದೆ. ಬಟ್ಟೆ ತೊಳೆಯುತ್ತಿದ್ದ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ಜಲಾಶಯಕ್ಕೆ ಬಿದ್ದಿದ್ದಾರೆ. ತಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ನೋಡಿದ ಮಕ್ಕಳಾದ ಪವಿತ್ರ ಹಾಗೂ ಕೀರ್ತಿ ರಕ್ಷಿಸಲು ಮುಂದಾಗಿದ್ದರು. ಆದರೆ ನೀರಿನ ಸೆಳೆತಕ್ಕೆ ಸಿಕ್ಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

4. ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ: ಶಿಕ್ಷಕನ ಅಮಾನತು

ಲೋಕಸಭೆ ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಮಾಗಡಿ ತಾಲೂಕಿನ ಕುದೂರು ಜಿಪಿಯುಸಿ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅಮಾನತುಗೊಳಿಸಿದ್ದಾರೆ. ಅಂಚೆ ಮತಪತ್ರ ಸಂಗ್ರಹ ಕರ್ತವ್ಯಕ್ಕೆ ಮೇಲ್ವಿಚಾರಣಾ ಸಿಬ್ಬಂದಿಯಾಗಿ ಕುದೂರು ಸರ್ಕಾರಿ ಪಿಯುಸಿ ಕಾಲೇಜಿನ ಉಪನ್ಯಾಸಕ ಕುಮಾರ್ ಅವರನ್ನು ನೇಮಿಸಲಾಗಿತ್ತು. ಆದರೆ ಕುಮಾರ್ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ತಾಲೂಕು ಕಚೇರಿಯಲ್ಲಿ ನಡೆದ ಸಭೆಗೂ ಗೈರಾಗಿದ್ದರು. ಹಾಗಾಗಿ, ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಕುಮಾರ್ ನನ್ನು ಅಮಾನತು ಮಾಡಲಾಗಿದೆ.

5. RameshwaramCafeblast ಶಿವಮೊಗ್ಗ ಬಿಜೆಪಿ ಘಟಕದ ಕಾರ್ಯದರ್ಶಿ NIA ವಶಕ್ಕೆ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ NIA ಅಧಿಕಾರಿಗಳು, ಶಿವಮೊಗ್ಗದ ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿರುವ ಸಾಯಿಪ್ರಸಾದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 27ರಂದು ಇಂಬ್ರೇಜ್ ಮಾಲೀಕತ್ವದ ಡಿಜಿಟಲ್ ಜೋನ್ ಮೊಬೈಲ್ ಮಳಿಗೆ ಮೇಲೆ NIA ಅಧಿಕಾರಿಗಳು ದಾಳಿ ಮಾಡಿದ್ದರು. ಅಂಗಡಿ ಮಾಲೀಕನಿಗೆ ಇವರು ಸ್ನೇಹಿತನಾಗಿದ್ದು ಇದೇ ಆಧಾರದ ಮೇಲೆ ಸಾಯಿಪ್ರಸಾದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

6. ಎರಡು ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು ಪೊಲೀಸರು ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು ಐವರಿ ಕೋಸ್ಟ್ ಪ್ರಜೆಯನ್ನು ಬಂಧಿಸಿದ್ದಾರೆ. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಸಿಕ್ಕ ಮಾಹಿತಿ ಮೇರೆಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ತಂಡವು ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 33 ವರ್ಷದ ಸೆಕಾ ಘಿಸ್ಲೇನ್ ತಾನೊ ಎಂಬಾತನನ್ನು ಬೊಮ್ಮನಹಳ್ಳಿಯಲ್ಲಿ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ. ಪೊಲೀಸರು ಆರೋಪಿ ಸೆಕಾ ಘಿಸ್ಲೇನ್ ಬಳಿಯಿದ್ದ ಮೊಬೈಲ್ ಫೋನ್ ಎರಡು ಕೆಜಿ MDMA ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com