ಬೆಂಗಳೂರು: ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ..
ಎಲ್ಲರಿಗೂ ಕ್ರೋಧಿ ನಾಮ ಸಂವತ್ಸರ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು...
ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪಂಚಾಗದ ಪ್ರಕಾರ ಯುಗಾದಿ ಹಬ್ಬದ ದಿನದಿಂದ ಹೊಸ ಸಂವತ್ಸರ ಅಂದರೆ ಹೊಸ ವರ್ಷ ಆರಂಭವಾಗುತ್ತದೆ. ಈ ಹಬ್ಬದಂದು ಬೇವು ಬೆಲ್ಲ ಹಂಚಿ, ವಿವಿಧ ಖಾದ್ಯಗಳನ್ನು ತಯಾರಿಸುವ ಜೊತೆಗೆ ಮನೆ ಅಲಂಕಾರಕ್ಕೂ ವಿಶೇಷ ಮಹತ್ವವಿದೆ. ಈ ದಿನ ತಳಿರು ತೋರಣಗಳಿಂದ ಮನೆ ಅಲಂಕಾರ ಮಾಡಬೇಕು. ಹೀಗೆ ಅಲಂಕಾರ ಮಾಡುವುದರಿಂದ ಮುಂದಿನ ದಿನಗಳಲ್ಲಿ ಶುಭವಾಗುತ್ತದೆ ಎಂಬ ನಂಬಿಕೆ.
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಯುಗಾದಿ. ಹೊಸ ಯುಗದ ಆದಿ ಯುಗಾದಿಯಾಗಿದೆ. ದಕ್ಷಿಣ ಭಾರತೀಯರಿಗೆ ಇಂದು ವಿಶೇಷ ಹಬ್ಬ. ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. 2024 ರಲ್ಲಿ, ಯುಗಾದಿ ಹಬ್ಬವು ಏಪ್ರಿಲ್ 9 ರಂದು ಮಂಗಳವಾರ ಬಂದಿದೆ. ಈ ದಿನವನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹಿಂದೂಗಳು ಹೊಸ ವರ್ಷವನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ.
ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರ ದರ್ಶನ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ಮುಂಜಾನೆಯಿಂದಲೇ ನಡೆಯುತ್ತಿದೆ. ಮನೆಗಳಲ್ಲಿ ಹೆಂಗಳೆಯರು, ಮಕ್ಕಳು ಬೆಳಗ್ಗೆಯೇ ಎದ್ದು ಮನೆ ಮುಂದೆ ನೀರು ಹಾಕಿ ರಂಗೋಲಿ ಇಟ್ಟು ಮನೆ, ದೇವರ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಹೊಸ ಉಡುಗೆ ತೊಟ್ಟು ಯುಗಾದಿ ಸಂಭ್ರಮಕ್ಕೆ ತೊಡಗುತ್ತಿದ್ದಾರೆ.
ದೇವರ ಮನೆಯನ್ನು ಅಲಂಕಾರಗೊಳಿಸಿ ಮನೆಯವರೆಲ್ಲಾ ಭಕ್ತಿಯಿಂದ ಪೂಜೆ, ದೇವರ ಧ್ಯಾನ, ಶ್ಲೋಕ, ಭಜನೆಗಳಲ್ಲಿ ತೊಡಗಿದ್ದಾರೆ. ಯುಗಾದಿ ಹಬ್ಬಕ್ಕೆ ವಿಶೇಷ ಅಡುಗೆಗಳನ್ನು ಮಾಡುತ್ತಿದ್ದಾರೆ.
ಬೆಲೆ ಏರಿಕೆ, ಬಿಸಿಲಿನ ಮಧ್ಯೆ ಬತ್ತದ ಉತ್ಸಾಹ: ಬೇಸಿಗೆಯ ಬಿರುಬಿಸಿಲು ಈ ಬಾರಿ ಜೋರಾಗಿಯೇ ಇದೆ. ಅದರ ಜೊತೆ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಹಬ್ಬ ಆಚರಣೆಯಲ್ಲಿ ಜನರು ಹಿಂದೆ ಬಿದ್ದಿಲ್ಲ.
ಹೂವಿಗೆ ಡಿಮ್ಯಾಂಡ್: ಸಾಮಾನ್ಯವಾಗಿ ಹಬ್ಬಗಳ ವೇಳೆ ಹೂವಿನ ಬೆಲೆ ಏರಿಕೆಯಾಗುತ್ತದೆ. ಈ ಬಾರಿಯೂ ಚೆಂಡು, ಗುಲಾಬಿ, ಬಟನ್ಸ್, ಸೇವಂತಿ ಬೆಲೆ ಸೇರಿದಂತೆ ಹಲವು ಬೆಲೆಗಳು ಏರಿಕೆಯಾಗಿವೆ. ಇತ್ತೀಚೆಗೆ ಗುಲಾಬಿ ಮತ್ತು ಚೆಂಡು ಹೂವಿನ ಬೆಲೆ ಪಾತಾಳಕ್ಕೆ ಕುಸಿದಿತ್ತು. ಆದರೆ ಈಗ ಬೆಲೆ ಏರಿಕೆಯಾಗಿದ್ದು ಗುಲಾಬಿ ಬೆಲೆ 250ರೂ. ವರೆಗೂ ಇದೆ. ಬಟನ್ಸ್ 200 ರೂ., ಸೇವಂತಿ ಬೆಲೆ ಕೆ.ಜಿ.ಗೆ 280ರೂವರೆಗೂ ಇತ್ತು. ಚೆಂಡೂ ಹೂವು ಬೆಲೆ ಕೆ.ಜಿ. 90 ರೂಪಾಯಿಗೆ ಏರಿಕೆಯಾಗಿತ್ತು.
ತರಕಾರಿ ದುಬಾರಿ: ಬರದ ಹಿನ್ನೆಲೆ ಪೂರೈಕೆ ಕೊರತೆಯಿಂದ ಈ ಬಾರಿ ಹಬ್ಬದ ಅಂಗವಾಗಿ ತರಕಾರಿ ದರಗಳು ಏರಿಕೆ ಕಂಡಿದ್ದವು. ಸೊಪ್ಪುಗಳ ಬೆಲೆಯೂ ಹೆಚ್ಚಾಗಿತ್ತು. ಇನ್ನೊಂದೆಡೆ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿದ್ದು, ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿ ಗ್ರಾಹಕರು ಅಳೆದುತೂಗಿ ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement