BJP ಕಾರ್ಯಕರ್ತನಿಗೆ congress ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ. ಶಿವರಾಮ್ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ! - ಈ ದಿನದ ಸುದ್ದಿ ಮುಖ್ಯಾಂಶಗಳು: 11-04-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಬಿಜೆಪಿ ಕಾರ್ಯಕರ್ತ‌ ನವೀನ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

ಬಿಜೆಪಿ ಕಾರ್ಯಕರ್ತ‌ ನವೀನ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ. ಶಾಶ್ವತವಾಗಿ ತಾನು ಸಿಎಂ ಆಗದೆ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಶಿವಕುಮಾರ್ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆರೋಪಿಯನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನ ರಕ್ಷಣೆ ಮಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಸರ್ಕಾರ ಈ ಕೂಡಲೇ ದೌರ್ಜನ್ಯ ನಡೆಸಿರುವ ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ನಿರ್ಭೀತಿಯಿಂದ ಚುನಾವಣೆ ನಡೆಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

2. ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಪಕ್ಷದಲ್ಲಿದ್ದರೂ ಅಂತರ ಕಾಯ್ದುಕೊಂಡಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಬನವಾಸಿಯಲ್ಲಿ ಇಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಸಮ್ಮುಖದಲ್ಲಿ ವಿವೇಕ್ ಹೆಬ್ಬಾರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಬಿಜೆಪಿಯಿಂದ ದೂರವಾಗಿದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಮಗ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ತಂದೆ ಶಿವರಾಮ್ ಹೆಬ್ಬಾರ್ ನಡೆ ಕುತೂಹಲ ಮೂಡಿಸಿದೆ. ಈಮಧ್ಯೆ, ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ ಅವರನ್ನು ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಸಂವಹನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

3. ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶ

ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರಾಖಂಡದ ಔಷದ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್‌ನಿಂದ ಬರುವ ಎಲ್ಲ ಉತ್ಪನ್ನಗಳ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು. ಬಾಬಾ ರಾಮದೇವ್ ಅವರು ಆಯುರ್ವೇದ ಮತ್ತು ಭಾರತೀಯ ವೈದ್ಯ ಪದ್ಧತಿಗೆ ಅಪಖ್ಯಾತಿ ತಂದಿದ್ದಾರೆ. ಆರೋಗ್ಯ, ವ್ಯಾಪಾರ ಅಥವಾ ರಾಜಕೀಯದಲ್ಲಿ ನಿಮಗೆ ಕುರುಡು ನಂಬಿಕೆ ಇದ್ದಾಗ ಹೀಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

4. ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಓಮಿನಿ ವ್ಯಾನ್ನಲ್ಲಿದ್ದ ಮೂವರು ಸಾವು

ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಓಮಿನಿ ವ್ಯಾನ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ಘಟನೆ ನಡೆದಿದೆ. ಮೃತರನ್ನು ರಾಕೇಶ್, ದೇವರಾಜ್ ಹಾಗೂ ನಂಜುಂಡಪ್ಪ ಎಂದು ಗುರುತಿಸಲಾಗಿದೆ. ಭೀಕರ ಅಪಘಾತದಲ್ಲಿ ಓಮಿನಿಯಲ್ಲಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಮತ್ತೊಂದೆಡೆ, ಬೆಂಗಳೂರಿನ ರಾಮಚಂದ್ರಾಪುರ ಆಟದ ಮೈದಾನದ ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಮದ್ಯ ಸೇವಿಸುತ್ತಿದ್ದ ಹುಡುಗರಿಗೆ ಕುಡಿಯಬೇಡಿ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಇಬ್ಬರು ಯುವಕರು 45 ವರ್ಷದ ವೆಂಕಟೇಶ್ ಎಂಬುವರಿಗೆ ಇರಿದು ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಪವನ್ ಕುಮಾರ್ ಮತ್ತು ನಂದ ಗೋಪಾಲ್ ಎಂಬುವರನ್ನು ಬಂಧಿಸಿದ್ದಾರೆ.

5. ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ

ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ 33 ಕೋಟಿ ರು ಆರ್ಥಿಕ ನೆರವು ನೀಡಿದೆ. ಬೆಂಗಳೂರಿನಲ್ಲಿ ಇರುವ ಸಿಐಡಿ ಘಟಕ, ಭಾರತೀಯ ದತ್ತಾಂಶ ಭದ್ರತಾ ಸಮಿತಿ (ಡಿಎಸ್‌ಸಿಐ) ಹಾಗೂ ಸೈಬರ್ ಅಪರಾಧಗಳ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಜೊತೆಗೆ ಈ ಕುರಿತ ಒಡಂಬಡಿಕೆಗೆ ಫೌಂಡೇಶನ್‌ ಅಂಕಿತ ಹಾಕಿದೆ. ಸೈಬರ್‌ ಅಪರಾಧಗಳ ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸಿಸಿಐಟಿಆರ್ ಜೊತೆಗಿನ ಒಡನಾಟವನ್ನು ಮತ್ತೆ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com