ಮೈಸೂರು, ಮಂಗಳೂರಿನಲ್ಲಿ ಪ್ರಧಾನಿ ಪ್ರಚಾರ, ಹೆಚ್ ಡಿಕೆ ವಿರುದ್ಧ ಮಹಿಳಾ ಆಯೋಗ ಕೇಸ್! ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ: ಈ ದಿನದ ಸುದ್ದಿ ಮುಖ್ಯಾಂಶಗಳು-14-04-2024

ಲೋಕಸಭಾ ಚುನಾವಣೆ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರonline desk

1. ಮೈಸೂರು, ಮಂಗಳೂರಿನಲ್ಲಿ ಪ್ರಧಾನಿ ಪ್ರಚಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಲೋಕಸಭಾ ಚುನಾವಣೆ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ​​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಲೋಕಸಭಾ ಚುನಾವಣೆ ಮುಂದಿನ 5 ವರ್ಷ ಬಹಳ ಮಹತ್ವದ್ದಾಗಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಇದು ಮೋದಿ ಗ್ಯಾರಂಟಿ. ದೇವೇಗೌಡರು ಕೂಡ ಭಾಷಣದಲ್ಲಿ ಗ್ಯಾರಂಟಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಂದಿನ 5 ವರ್ಷಗಳವರೆಗೆ ಉಚಿತ ರೇಷನ್ ನೀಡುತ್ತೇವೆ. 75 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. ಬಡವರಿಗೆ ಹೊಸ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

2. ರಾಜ್ಯದ ಹಲವೆಡೆ ಮಳೆ, ಸಿಡಿಲಿಗೆ 3 ಮಂದಿ ಸಾವು

ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು ಸಾವು, ನೋವು ಸಂಭವಿಸಿದೆ. ವಿಜಯಪುರದಲ್ಲಿ ಸಿಡಿಲಿಗೆ ಮೂವರು ಬಲಿಯಾಗಿದ್ದರೆ, ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ವ್ಯಕ್ತಿಯೋರ್ವ ಜಮೀನಿಗೆ ಹೋಗಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೃತನ ಕುಟುಂಬದವರನ್ನು ಭೇಟಿ ಮಾಡಿರುವ ತಹಶೀಲ್ದಾರ್, ಸ್ವಾಂತನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿಯೂ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಸಿಡಿಲಿಗೆ ರೈತ ಬಲಿಯಾಗಿದ್ದಾರೆ.

3. 24 ಗಂಟೆಗಳಲ್ಲಿ 87 ಕೆ.ಜಿ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 87.78 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನದ ಜೊತೆಗೆ 35.59 ಕೆಜಿ ಬೆಳ್ಳಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 13ರವರೆಗೆ ವಶಪಡಿಸಿಕೊಂಡಿರುವ ಒಟ್ಟು ಚಿನ್ನ ಮತ್ತು ಬೆಳ್ಳಿಯ ಮೌಲ್ಯ 101.65 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

4. ಹೆಚ್ ಡಿಕೆ ವಿರುದ್ಧ ಮಹಿಳಾ ಆಯೋಗ ಕೇಸ್

ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಸಂಬಂಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಮಹಿಳೆಯರ ಘನತೆಗೆ, ಚಾರಿತ್ರ್ಯಕ್ಕೆ ಕುಮಾರಸ್ವಾಮಿ ಅವರು ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಹೇಳಿಕೆಯನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿ ಸುಮೋಟೋ‌ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ನೋಟಿಸ್‌ ಜಾರಿ ಮಾಡಲಿದೆ.ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಹೆಚ್​ಡಿ ಕುಮಾರಸ್ವಾಮಿ​ ಮಾತನಾಡಿ ಇವತ್ತಿನ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

5. ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ

ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನರಾಗಿದ್ದು, ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ತಮ್ಮ ನಿವಾಸದಲ್ಲಿ ಸಾವಿಗೀಡಾಗಿದ್ದು, ಆರ್ಥಿಕ ಸಮಸ್ಯೆಗೆ ಸಿಲುಕಿ ಇತ್ತೀಚೆಗೆ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಇತ್ತೀಚೆಗೆ ಅವರ ಜಗದೀಶ್ ಅವರ ಪುತ್ರಿಯ ವಿವಾಹ ನೆರವೇರಿತ್ತು. ಕನ್ನಡದಲ್ಲಿ ಅಪ್ಪು ಪಪ್ಪು, ರಾಮ್ ಲೀಲಾ, ಸ್ನೇಹಿತರು, ಮಸ್ತ್ ಮಜಾ ಮಾಡಿ ಇತ್ಯಾದಿ ಚಿತ್ರಗಳನ್ನು ಸೌಂದರ್ಯ ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com