ನಟ, ನಿರ್ಮಾಪಕ ದ್ವಾರಕೀಶ್ ನಿಧನ, ಸೌಮ್ಯ ರೆಡ್ಡಿ ವಿರುದ್ಧ ದೂರು ದಾಖಲು, ತೈಲ ಬೆಲೆ ಏರಿಕೆ ಸಾಧ್ಯತೆ-ಜೈಶಂಕರ್: ಈ ದಿನದ ಸುದ್ದಿ ಮುಖ್ಯಾಂಶಗಳು-16-04-2024

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರonline desk

1. ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದ್ವಾರಕೀಶ್ ನಿಧನಕ್ಕೆ ನಟ, ನಟಿಯರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬುಧವಾರ ಬೆಳಿಗ್ಗೆ 7.30ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರಿಗೆ ದ್ವಾರಕೀಶ್ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

2. ಶಿಸ್ತುಕ್ರಮ ಎದುರಿಸಲು ನಾನು ಬಿಜೆಪಿಯಲ್ಲಿಲ್ಲ: ಪಕ್ಷೇತರ ಅಭ್ಯರ್ಥಿ

ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಶಿಸ್ತು ಕ್ರಮ ಎದುರಿಸುವುದಕ್ಕೆ ತಾವು ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ, ನನ್ನ ಉದ್ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಗಳಂತೆಯೇ ಇದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಪ್ಪ ಮಕ್ಕಳ (ಯಡಿಯೂರಪ್ಪ- ಹಾಗು ಪುತ್ರರು) ಹಿಡಿತದಿಂದ ಮುಕ್ತಗೊಳಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

3. ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯಲ್ಲಿ ಗದ್ದಲ: ಸೌಮ್ಯ ರೆಡ್ಡಿ ವಿರುದ್ಧ ದೂರು

ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹಾಗೂ ಅವರ ಬೆಂಬಲಿಗರ ವಿರುದ್ಧ ಸಭೆಯ ಆಯೋಜಕರು ದೂರು ದಾಖಲಿಸಿದ್ದಾರೆ. ಏಪ್ರಿಲ್‌ 13ರಂದು ಠೇವಣಿದಾರರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಭೆಯಿಂದ ಹೊರನಡೆದಿದ್ದರು. ಕಾಂಗ್ರೆಸ್ ಪಕ್ಷದ ಬೆಂಬಲಿಗರು ಸಭೆಯಲ್ಲಿ ಠೇವಣಿದಾರರಾಗಿ ಕಾಣಿಸಿಕೊಂಡು ಗದ್ದಲ ಸೃಷ್ಟಿಸಿದ್ದಾರೆಂದು ಸಭೆಯ ಆಯೋಜಕರು ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಭೆಯ ಆಯೋಜಕರು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಲಕ್ಷ್ಮಿ ಮಂಜುಳಾ ಮತ್ತು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

4. ತುಮಕೂರಿನಲ್ಲಿ HDK ವಿರುದ್ಧ ಮಹಿಳೆಯರ ಪ್ರತಿಭಟನೆ

ತುಮಕೂರಿನಲ್ಲಿ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮಾತನಾಡುತ್ತಿದ್ದ ವೇಳೆ ವೇದಿಕೆಗೆ ನುಗ್ಗಿದ ಮಹಿಳೆಯರು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ. ಕೆಲವು ನಾಯಕರು ಮಾತನಾಡುವವರೆಗೂ ಕಾದು ದೇವೇಗೌಡರು ಭಾಷಣ ಮಾಡುವ ಸರದಿ ಬಂದಾಗ ಘೋಷಣೆಗಳನ್ನು ಕೂಗಿದರು. ಈ ಘಟನೆಯನ್ನು ಉಲ್ಲೇಖಿಸಿ ಜೆಡಿಎಸ್ ಚುನಾವಣಾ ಆಯೋಗದ ಮೊರೆ ಹೋಗಿದ್ದು, ಪಕ್ಷದ ಸಭೆಗಳಿಗೆ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದೆ.

5. ಸುಡಾನ್ ನಲ್ಲಿ ಮೈಸೂರು ಮೂಲದ ಮಹಿಳೆ ಸಾವು

ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಬುಡಕಟ್ಟು ಮಹಿಳೆಯೊಬ್ಬರು ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಉದ್ಯಮಕ್ಕೆ ಸಂಬಂಧಿಸಿದ ವಿಚಾರವಾಗಿ ನಂದಿನಿ ಎಂಬುವವರು ಸುಡಾನ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆಕೆಯ ಸಾವಿನ ಹಿಂದಿನ ನಿಖರ ಕಾರಣವನ್ನು ಅಧಿಕಾರಿಗಳು ನೀಡಿಲ್ಲ. ನಂದಿನಿಯ ಪತಿ ಮೈಸೂರು ನಗರ ಸಮೀಪದ ಹುಣಸೂರು ಪಟ್ಟಣದ ಪಕ್ಷಿರಾಜಪುರದಲ್ಲಿ ನೆಲೆಸಿದ್ದು, ಸುಡಾನ್‌ನಿಂದ ನಂದಿನಿಯ ಮೃತದೇಹವನ್ನು ವಾಪಸ್ ತರುವಂತೆ ಕುಟುಂಬ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಏಪ್ರಿಲ್ 17 ರಂದು ನಂದಿನಿ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದೆ.

6. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದರೆ ತೈಲ ಬೆಲೆ ಏರಿಕೆ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಗಳು ಹೀಗೆಯೇ ಮುಂದುವರೆದಲ್ಲಿ, ಅದು ಭಾರತದ ಮೇಲೆಯೂ ಪರಿಣಾಮ ಬೀರಲಿದ್ದು, ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಅಸ್ಥಿರತೆಗಳಿಂದಾಗಿ ಆಮದು ವೆಚ್ಚ, ವಿಮೆ ವೆಚ್ಚ, ಇಂಧನ ವೆಚ್ಚಗಳು ಹೆಚ್ಚಾಗಲಿದ್ದು, ತೈಲ ಬೆಲೆ ಏರಿಕೆಯಾಗುವ ಸಂಭವವಿದೆ ಎಂದು ಬೆಂಗಳೂರಿನಲ್ಲಿ ಹಿರಿಯ ಸಂಪಾದಕರೊಂದಿಗಿನ ಸಭೆಯಲ್ಲಿ ಜೈಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com