Congress ಗೆದ್ದರೆ ಮಹಿಳೆಯರಿಗೆ 1.24 ಲಕ್ಷ ರೂ. ರಾಹುಲ್ ಭರವಸೆ. ಡಿಕೆ ಸುರೇಶ್‌ಗೆ ಮತ ನೀಡುವಂತೆ ಡಿಕೆಶಿ ಆಮಿಷ. ಯೂಟ್ಯೂಬರ್ ಬಂಧನ! - ಈ ದಿನದ ಸುದ್ದಿ ಮುಖ್ಯಾಂಶಗಳು: 17-04-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. Congress ಗೆದ್ದರೆ ಮಹಿಳೆಯರಿಗೆ 1.24 ಲಕ್ಷ ರೂ. ರಾಹುಲ್ ಭರವಸೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಶುರು ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ. ರಾಜ್ಯದಲ್ಲಿ ಬಡ ಮಹಿಳೆಯರಿಗೆ ಈಗಾಗಲೇ ನೀಡುತ್ತಿರುವ 24 ಸಾವಿರಕ್ಕೆ 1 ಲಕ್ಷ ರೂ. ಸೇರಿಸಿ 1 ಲಕ್ಷದ 24 ಸಾವಿರ ರೂಪಾಯಿ ನೀಡುತ್ತೇವೆ ಎಂಬ ಭರವಸೆ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಎಂದರು.

2. ಡಿಕೆ ಸುರೇಶ್‌ಗೆ ಮತ ನೀಡುವಂತೆ ಡಿಕೆಶಿ ಆಮಿಷ, ಬಿಜೆಪಿ ಆರೋಪ

ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿದ್ದು ಎಲ್ಲ ರಾಜಕೀಯ ಪಕ್ಷಗಳು ಮತಯಾಚನೆಯಲ್ಲಿ ತೊಡಗಿಕೊಂಡಿವೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಮತಯಾಚಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಮಗೆ ಹಕ್ಕುಪತ್ರ ನೀಡಬೇಕಾದರೆ, ಕಾವೇರಿ ನೀರು ಬೇಕಿದ್ದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿರುವ 3 ನಿಮಿಷದ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಡಿಕೆ ಸುರೇಶ್ಗೆ ಮತ ಹಾಕದಿದ್ದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕುಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

3. ಸಂಗಣ್ಣ ಕರಡಿ ಕಾಂಗ್ರೆಸ್ ಗೆ, ಬಿಜೆಪಿಗೆ ಅಖಂಡ ಶ್ರೀನಿವಾಸ್

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸಂಸದ ಸಂಗಣ್ಣ ಕರಡಿ ಲೋಕಸಭಾ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಕರಡಿಗೆ ಈ ಬಾರಿ ಕೊಪ್ಪಳ ಲೋಕಸಭೆ ಟಿಕೆಟ್ ಸಿಕ್ಕಿರಲಿಲ್ಲ. ಮತ್ತೊಂದೆಡೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಆ ಬಳಿಕ ಬಿಎಸ್ಪಿ ಪಕ್ಷದಿಂದ ಟಿಕೆಟ್ ಪಡೆದು ಪುಲಿಕೇಶಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

4. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಡಿಯೋ ಚಿತ್ರೀಕರಣ; ಯೂಟ್ಯೂಬರ್ ಬಂಧನ

ಬೆಂಗಳೂರಿನಿಂದ ಚೆನ್ನೈ ಗೆ ತೆರಳುವ ಕಾರಣ ನೀಡಿ ವಿಮಾನ ನಿಲ್ದಾಣದ ಭದ್ರತೆಯನ್ನು ಉಲ್ಲಂಘನೆ ಮಾಡಿದ 23 ವರ್ಷದ ಯೂಟ್ಯೂಬರ್ ನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 12ರಂದು ತನ್ನ ಯೂಟ್ಯೂಬ್ ಚಾನಲ್ ಗೆ ವೀಡಿಯೋ ಅಪ್ ಲೋಡ್ ಮಾಡಿದ್ದ ಬೆಂಗಳೂರು ಮೂಲದ ವಿಕಾಸ್ ಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು/ ಭದ್ರತೆಯನ್ನು ಲೇವಡಿ ಮಾಡಿದ್ದನು. ಈ ಸಂಬಂಧ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ ಪೆಕ್ಟರ್ ಮುರಳಿ ಲಾಲ್ ಮೀನಾ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

5. ಕುದುರೆಗಳಲ್ಲಿ ಗ್ಲಾಂಡರ್ಸ್ ಎನ್ನುವ ಮಾರಕ ರೋಗ ಪತ್ತೆ

ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಎರಡು ಕುದುರೆಗಳಲ್ಲಿ ಗ್ಲಾಂಡರ್ಸ್ ಎನ್ನುವ ಮಾರಕ ರೋಗ ಪತ್ತೆಯಾಗಿದ್ದು, ಒಂದು ಕುದುರೆ ಮೃತಪಟ್ಟಿದೆ. ಇದೊಂದು ಸೋಂಕು ರೋಗವಾಗಿರುವುದರಿಂದ, ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದ್ದರೆ 5ರಿಂದ 25 ಕಿ.ಮೀ. ಪ್ರದೇಶವನ್ನು ಜಾಗೃತ ವಲಯ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ 1200 ಕುದುರೆಗಳಿವೆ. ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ.

6. ಧಾರವಾಡದಲ್ಲಿ 18 ಕೋಟಿ ರೂಪಾಯಿ ವಶ

ಧಾರವಾಡದ ದಾಸನಕೊಪ್ಪ ರಸ್ತೆಯಲ್ಲಿರೋ ಆರ್ನಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿರೋ ಯು.ಬಿ.ಶೆಟ್ಟಿ ಕಚೇರಿಯ ಅಕೌಂಟೆಂಟ್ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ತಕ್ಷಣವೇ ಅಧಿಕಾರಿಗಳು ಬಸವರಾಜ ದುತ್ತನ್ನವರ್ ಎಂಬುವವರ ಮನೆ ದಾಳಿ ಮಾಡಿದ್ದರು. ಚುನಾವಣಾ ಕ್ಷಿಪ್ರ ಕಾರ್ಯಪಡೆ ಮನೆಯ ಮೂಲೆ ಮೂಲೆಯಲ್ಲಿ ಶೋಧಿಸಿದ್ದಾರೆ. ಆದರೆ ಎಲ್ಲೂ ಮದ್ಯದ ಬಾಟಲಿ ಸಿಕ್ಕಿಲ್ಲ. ಬದಲಾಗಿ ಕಂತೆ ಕಂತೆ 18 ಕೋಟಿ ರೂಪಾಯಿ ಹಣ ಸಿಕ್ಕಿದೆ. ಬಳಿಕ ಐಟಿ ಅಧಿಕಾರಿಗಳು ಸಿಕ್ಕ 18 ಕೋಟಿ ರೂಪಾಯಿ ಹಣವನ್ನು ಹುಬ್ಬಳ್ಳಿಯ ಕೇಶ್ವಾಪುರದ ಎಸ್ಬಿಐ ಬ್ಯಾಂಕ್ಗೆ ತೆಗೆದುಕೊಂಡು ಹೋಗಿ ಐಟಿ ಖಾತೆಗೆ ಜಮೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com