ಪ್ರಹ್ಲಾದ್ ಜೋಶಿಗೆ ಸೆಡ್ಡು: ನಾಮಪತ್ರ ಸಲ್ಲಿಸಿದ ಸ್ವಾಮೀಜಿ. ಮಂಡ್ಯದಲ್ಲಿ 'ಕೈ' ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ, ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ? - ಈ ದಿನದ ಸುದ್ದಿ ಮುಖ್ಯಾಂಶಗಳು 18-04-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಪ್ರಹ್ಲಾದ್ ಜೋಶಿಗೆ ಸೆಡ್ಡು: ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೆಡ್ಡು ಹೊಡೆದಿರುವ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ನಿಂದ ವಿನೋದ ಅಸೂಟಿ ಅಖಾಡಕ್ಕಿಳಿದಿದ್ದಾರೆ. ತಮಗೆ ಎಲ್ಲಾ ಜಾತಿ, ಧರ್ಮದವರು, ರೈತ ಸಂಘಟನೆಗಳ ಬೆಂಬಲ ಇದೆ ಎನ್ನುತ್ತಿರುವ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಇಂದು ಮಧ್ಯಾಹ್ನ ಯಾವುದೇ ಮೆರವಣಿಗೆ ‌ಇಲ್ಲದೇ, ನಾಲ್ವರೊಂದಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮತ್ತೊಂಡೆದೆ, ಕಳೆದ ಬಾರಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದ ನಟ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ ಮಾಡಿದ್ದು, ಜೆಡಿಎಸ್ ಗೆ ಸುಮಲತಾ ಸೈಲಂಟ್ ಆಗಿ ಶಾಕ್ ಕೊಟ್ಟಿದ್ದಾರೆ.

2. ಬೆಂಗಳೂರು ಹಿಂದೂ ಯುವಕರ ಮೇಲೆ ಹಲ್ಲೆ, ನಾಲ್ವರು ಮುಸ್ಲಿಂ ಯುವಕರ ಬಂಧನ

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಫರ್ಮಾನ್, ಸಮೀರ್ ಎ1.ಎ2 ಎಂದು ಎಫ್ಐಆರ್ ದಾಖಲಿಸಿ ಆರೋಪಿಗ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡಲಾಗಿ ಘಟನೆಯಲ್ಲಿ ನಾಲ್ವರು ಭಾಗಿಯಾಗಿರುವುದು ತಿಳಿದುಬಂದಿದೆ.

3. ಮಂಡ್ಯ: ಕುಡಿಯುವ ನೀರಿನಲ್ಲಿ ವಿಷ ಬೆರಸಿ ಪತ್ನಿ, ಮಕ್ಕಳಿಬ್ಬರನ್ನು ಕೊಂದ ಪಾಪಿ!

ಕುಡಿಯುವ ನೀರಿನಲ್ಲಿ ಕ್ರಿಮಿನಾಶಕ ಬೆರಸಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿರುವ ದಾರುಣ ಘಟನೆ ಮಂಡ್ಯದ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಪತ್ನಿ ಕೀರ್ತನಾ ಮಗ ಜಯಸಿಂಹ ಮಗಳು ರಿಷಿಕಾಗೆ ವಿಷ ಬೆರೆಸಿದ ನೀರು ಕುಡಿಸಿ ಕೊಂದ ಬಳಿಕ ಆರೋಪಿ ನರಸಿಂಹ ತಾನೂ ನೀರನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ನರಸಿಂಹನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ದುರ್ಘಟನೆಯಲ್ಲಿ, ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ ಎಂಬಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಶಿವಾನಿ ಅಂಬೇಕರ್ ಎಂಬುವರ ಮದುವೆಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ.

4. ಬೆಂಗಳೂರು: ಸ್ಕೂಟರ್ ಫುಟ್‌ರೆಸ್ಟ್‌ನಲ್ಲಿ ಮಗು ನಿಲ್ಲಿಸಿಕೊಂಡು ಸವಾರಿ; ದಂಪತಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರಿನಲ್ಲಿ ಮಗನ ಹುಟ್ಟುಹಬ್ಬದ ಆಸೆಯನ್ನು ಪೂರೈಸಲೆಂದು ಸ್ಕೂಟರ್‌ನ ಫುಟ್‌ರೆಸ್ಟ್ ಮೇಲೆ ಆತನನ್ನು ನಿಲ್ಲಿಸಿಕೊಂಡು ಸವಾರಿ ಮಾಡಿದ ಟೆಕ್ಕಿ ದಂಪತಿ ಇದೀಗ ಸಂಕಷ್ಟ ಎದುರಾಗಿದೆ. ದ್ವಿಚಕ್ರ ವಾಹನದ ಫುಟ್‌ರೆಸ್ಟ್‌ ನಲ್ಲಿ ದಂಪತಿ ತಮ್ಮ ಮಗನನ್ನು ನಿಲ್ಲಿಸಿಕೊಂಡು ಸವಾರಿ ಮಾಡುತ್ತಿದ್ದಾಗ, ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ವಿಡಿಯೋ ವೈರಲ್ ಆದ ಬಿಳಿಕ ಮಹದೇವಪುರ ಸಂಚಾರಿ ಠಾಣೆ ಪೊಲೀಸರು ಕೇರಳ ಮೂಲದ ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

5. ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತವಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಚುನಾವಣಾ ಆಯೋಗ, ಹಲವು ಪೊಲೀಸ್‌ ಇಲಾಖೆಗಳು ಇದಕ್ಕೆ ಸ್ಪಷ್ಟನೆ ನೀಡಿ, ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಇದರ ಕುರಿತು ಯಾವುದೇ ಮಾಧ್ಯಮಗಳೂ ವರದಿ ಮಾಡಿಲ್ಲ. ಇವೆಲ್ಲ ನಕಲಿ ಸುದ್ದಿಯಾಗಿವೆ. ಯಾರೂ ಕೂಡ ಇಂತಹ ಪೋಸ್ಟ್‌ಗಳನ್ನು ಶೇರ್‌ ಮಾಡಬಾರದು ಎಂಬುದಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

6. ಅರ್ಜುನ ಸಾವಿನ ಬಳಿಕ, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ 'ಕರಡಿ' ಸೆರೆ!

ಕಳೆದ ಜನವರಿ 4ರಂದು ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ ಎಂಬ ಕೂಲಿ ಕಾರ್ಮಿಕನನ್ನು ಬಲಿ ಪಡೆದಿದ್ದಲ್ಲದೆ ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದ ಕರಡಿ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಯನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ. ಎಂಟು ಆನೆಗಳ ಸಹಾಯದಿಂದ ಕಾರ್ಯಾಚರಣೆ ಮೂಲಕ ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com