ನೇಹಾ ಹಿರೇಮಠ್ ಹತ್ಯೆ: ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ
ಬೆಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಅಮಾನುಷ ಘಟನೆಯಾಗಿದೆ. ಇದನ್ನು ಪೋಲಿಸರು ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕಾಗಿರುವುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆಯುತ್ತಿರುವುದು ಸ್ಪಷ್ಟವಾಗಿದೆ, ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಸಿದ್ದಾಂತಕ್ಕಾಗಿ ಜನ್ಮ ತಾಳಿದ ಪಕ್ಷ , ನಮ್ಮ ಆದ್ಯತೆ ಏನಿದ್ದರೂ ‘ಧ್ಯೇಯ’ಕ್ಕೇ ಹೊರತು ಅಧಿಕಾರಕ್ಕಲ್ಲ, ಚುನಾವಣಾ ಕಾರ್ಯವನ್ನು ಬದಿಗಿರಿಸಿ ಏಪ್ರಿಲ್ 22 ರ ಸೋಮವಾರದಂದು ನಮ್ಮ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ