ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ: ರಮೇಶ್ ಕುಮಾರ್, ನೇಹ ಪ್ರಕರಣ: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ!- ಈ ದಿನದ ಸುದ್ದಿ ಮುಖ್ಯಾಂಶಗಳು 21-04-2024

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ: ರಮೇಶ್ ಕುಮಾರ್, ನೇಹ ಪ್ರಕರಣ: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ!- ಈ ದಿನದ ಸುದ್ದಿ ಮುಖ್ಯಾಂಶಗಳು 21-04-2024

1. ನೇಹ ಪ್ರಕರಣ: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ!

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.ಬಂದ್ ಗೆ ಕರೆ ನೀಡಿರುವ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಬಗ್ಗೆ ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆಯುತ್ತಿರುವುದು ಸ್ಪಷ್ಟವಾಗಿದೆ, ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ. ಏಪ್ರಿಲ್ 22 ರಂದು ನಮ್ಮ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಇನ್ನು ನೇಹಾ ಹತ್ಯೆ ಖಂಡಿಸಿ, ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಅಂಗಡಿ ಧಾರವಾಡ ಬಂದ್ ಗೆ ಕರೆ ನೀಡಲಾಗಿತ್ತು. ಈ ಮಧ್ಯೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನಿರಂಜನ್ ಹಿರೇಮಠ ನಿವಾಸಕ್ಕೆ ತೆರಳಿ ನೇಹಾ ಹಿರೇಮಠ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಸಹ ನಿರಂಜನ ಹಿ ರೇಮಠ ಅವರಿಗೆ ಕರೆ ಮಾಡಿ ಸಾಂತ್ವನ ತಿಳಿಸಿ ದ್ದಾರೆ.

2. ಬಿಜೆಪಿ ಅಭ್ಯರ್ಥಿ ಯದುವೀರ್ ವಿರುದ್ಧ ಕಾಂಗ್ರೆಸ್ ದೂರು

ನೀತಿ ಸಂಹಿತೆ ಉಲ್ಲಂಘಿಸಿ ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಒಡೆಯರ್ ಬೆಂಬಲ ಕೋರುವ ಸ್ಪಷ್ಟ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಹಲವಾರು ಪ್ರಭಾವಿ ವ್ಯಕ್ತಿಗಳೊಂದಿಗೆ ಸಭೆ ನಡೆಸಿದ್ದಾರೆ. 'ರಹಸ್ಯವಾಗಿ ನಡೆಸಲಾದ ಈ ಸಭೆಯಲ್ಲಿ, ಅವರಿಗೆ ವೈಯಕ್ತಿಕ ನೋಟ್‌ಬುಕ್‌ಗಳು, ಪೆನ್ನುಗಳು, ಚಾಕೊಲೇಟ್‌ಗಳು, ಸೀರೆಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಉಡುಗೊರೆಗಳನ್ನು ನೀಡಲಾಗಿದೆ' ಎಂದು ಅದು ಆರೋಪಿಸಿದೆ.

3. ವಶಕ್ಕೆ ಪಡೆದ 2 ಕೋಟಿ ಹಣ ಬಿಜೆಪಿಗೆ ವಾಪಸ್- ಕೃಷ್ಣಭೈರೇಗೌಡ ಆರೋಪ

ಚುನಾವಣಾ ಆಯೋಗ ವಶಕ್ಕೆ ಪಡೆದಿದ್ದ ಸುಮಾರು ₹2 ಕೋಟಿ ಹಣವನ್ನು, ಸೀಜ್ ಮಾಡಿದ ಕೆಲವೇ ಗಂಟೆಗಳಲ್ಲಿ ಐಟಿ ಅಧಿಕಾರಿಗಳು ಬಿಜೆಪಿಗೆ ವಾಪಸ್ ನೀಡಿದ್ದು, ‘ಬಿಜೆಪಿ ನಾಯಕರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ನಾಯಕರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಇಡೀ ವ್ಯವಸ್ಥೆಯನ್ನೇ ಅವಮಾನಿಸುವ ರೀತಿ ಚುನಾವಣೆ ನಡೆಸುತ್ತಿದ್ದಾರೆ. “ಚುನಾವಣಾ ಖರ್ಚಿಗಾಗಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ ₹2 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು ಕಾಟನ್‌ ಪೇಟೆಯಲ್ಲಿಯಲ್ಲಿ ಸೀಜ್ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಲಾದ ಹಣಕ್ಕೆ ಕೇವಲ 4 ಗಂಟೆಯಲ್ಲಿ ಕ್ಲೀನ್ ಚಿಟ್‌ ನೀಡಿ, ಹಣವನ್ನೂ ಬಿಜೆಪಿಗೆ ಹಿಂತಿರುಗಿಸಿದೆ. ಇದು ಹೇಗೆ ಸಾಧ್ಯವಾಯಿತು” ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಾಹಿತಿ ನೀಡದೆ ಹೀಗೆ ₹2 ಕೋಟಿ ಹಣವನ್ನು ವರ್ಗಾಯಿಸುತ್ತಿರುವುದು ಮನಿ ಲಾಂಡರಿಂಗ್ ಅಲ್ಲವೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.

4. ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ-ರಮೇಶ್ ಕುಮಾರ್

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಾಲಿಗೆ ಹರಿಬಿಟ್ಟಿದ್ದಾರೆ.

ಕೋಲಾರದಲ್ಲಿ ಮಾತನಾಡಿರುವ ರಮೇಶ್ ಕುಮಾರ್, ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ ಎಂದು ಹೇಳಿದ್ದಾರೆ. ಜೂ.04 ಕ್ಕೆ ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಿನಲ್ಲಿ ಬಂದು ಕುಳಿತುಬಿಟ್ಟೆಯಲ್ಲಪ್ಪಾ ಮೋದಿ, ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ರಮೇಶ್ ಕುಮಾರ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

5. ಮೋದಿ ಭೇಟಿ ವೇಳೆ ಚೊಂಬು ಹಿಡಿದು ಪ್ರತಿಭಟನೆ-ನಳಪಾಡ್ ಬಂಧನ, ಬಿಡುಗಡೆ

ಪ್ರಧಾನಿ ಮೋದಿ ಬೆಂಗಾವಲು ವಾಹನಗಳು ಸಂಚರಿಸಬೇಕಿದ್ದ ಮಾರ್ಗದ ಸಮೀಪ ಖಾಲಿ ಚೊಂಬು ಪ್ರದರ್ಶಿಸಿ ಪ್ರತಿಭಟಿಸಲು ಯತ್ನಿಸಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಅವರ ಬೆಂಗಾವಲು ವಾಹನಗಳು ಸಂಚರಿಸಬೇರಿದ್ದ ಮಾರ್ಗದ ಸಮೀಪದ ಮೇಖ್ರಿ ವೃತ್ತದಲ್ಲಿ ನಲಪಾಡ್ ಖಾಲಿ ಚೊಂಬು ಪ್ರದರ್ಶಿಸಲು ಮುಂಜಾಗಿದ್ದರು. ಈ ವೇಳೆ ಅಲ್ಲೇ ಇದ್ದ ಪೊಲೀಸರು ನಲಪಾರ್ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಮೋದಿಯವರ ಬೆಂಗಾವಲು ಪಡೆ ಅರಮನೆ ಮೈದಾನದಿಂದ ಹೊರಡುವ ಕೆಲವೇ ನಿಮಿಷಗಳ ಮೊದಲು ನಲಪಾಡ್ ಅವರನ್ನು ಬಂಧಿಸಲಾಗಿದೆ. ಹೀಗಾಗಿ ಇದನ್ನು ಭದ್ರತಾ ಉಲ್ಲಂಘನೆ ಎಂದು ಕರೆಯಲಾಗುವುದಿಲ್ಲ ”ಎಂದು ಡಿಸಿಪಿ (ಕೇಂದ್ರ) ಬಿಕೆ ಶೇಖರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com