1 ವಾರದಲ್ಲಿ ರಾಜ್ಯಕ್ಕೆ ಬರ ಪರಿಹಾರ- ಸುಪ್ರೀಂ ಗೆ ಕೇಂದ್ರ, ನೇಹಾ ಪ್ರಕರಣ; ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ತನಿಖೆ ಸಿಐಡಿಗೆ, ದಿಂಗಾಲೇಶ್ವರ ಶ್ರೀ ನಾಮಪತ್ರ ವಾಪಸ್- ಈ ದಿನದ ಸುದ್ದಿ ಮುಖ್ಯಾಂಶಗಳು-22-04-2024

ಕರ್ನಾಟಕದ ರೈತರಿಗೆ ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರonline desk

ಕರ್ನಾಟಕದ ರೈತರಿಗೆ ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.

1. ಒಂದು ವಾರದೊಳಗೆ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ- ಸುಪ್ರೀಂ ಕೋರ್ಟ್ ಗೆ ಕೇಂದ್ರ 

ಕರ್ನಾಟಕದ ರೈತರಿಗೆ ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ. ರಾಜ್ಯಕ್ಕೆ ಬರಪರಿಹಾರದ ಮೊತ್ತ ಬಂದಿಲ್ಲ. ಪರಿಹಾರ ಬಿಡುಗಡೆ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಏಪ್ರಿಲ್ 29ರೊಳಗೆ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ ನ್ಯಾಯ ಪೀಠಕ್ಕೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕನ್ನಡಿಗರ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದ್ದು, ಪರಿಹಾರ ವಿಳಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಧನ್ಯವಾದ ತಿಳಿಸಿದ್ದಾರೆ.

2. ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ- ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಮಧ್ಯೆ, ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ನೇಹಾ ಹತ್ಯೆ ಪ್ರಕರಣದಲ್ಲಿ 'ಲವ್ ಜಿಹಾದ್' ಇದೆ ಎಂದು ಬಿಜೆಪಿ ಆರೋಪಿಸಿದ್ದು, ಅದೇ ಆಯಾಮದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಹತ್ಯೆಯನ್ನು ಖಂಡಿಸಿ ಅಂಜುಮನ್ ಎ-ಇಸ್ಲಾಂ ಸಂಸ್ಥೆ ಪ್ರತಿಭಟನೆ ನಡೆಸಿದ್ದು, ನೇಹಾ ಹಿರೇಮಠ್‌ಗೆ ನ್ಯಾಯ ಸಿಗಬೇಕು’ ಎಂದು ಒತ್ತಾಯಿಸಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಅರ್ಧ ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

3. ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಮಗ ಸೇರಿ 8 ಜನರ ಬಂಧನ

ಗದಗದಲ್ಲಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಹಿರಿಯ ಮಗ ಸಹಿತ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಅಮಾಯಕರು ಕೊಲೆಯಾಗಿದ್ದರು. ಘಟನೆ ನಡೆದ 48 ಗಂಟೆಗಳ ಒಳಗಾಗಿಯೇ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ. ದೂರುದಾರ ಪ್ರಕಾಶ ಬಾಕಳೆ ಅವರ ಮೊದಲ ಪತ್ನಿಯ ಹಿರಿಯ ಮಗ ವಿನಾಯಕ ಬಾಕಳೆ ಪ್ರಕರಣದ ಪ್ರಮುಖ ಆರೋಪಿ. ತಂದೆ ಪ್ರಕಾಶ ಬಾಕಳೆ ಹಾಗೂ ತಂದೆ ವಿನಾಯಕ ಬಾಕಳೆ ಮಧ್ಯೆ ಆಸ್ತಿ ವಿಚಾರವಾಗಿ ಕೆಲ ತಿಂಗಳ ಹಿಂದೆ ಜಗಳ ನಡೆದಿತ್ತು. ಈ ವಿಚಾರವಾಗಿ ಇಬ್ಬರ ಮಧ್ಯೆ ಕಲಹ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆ ನಡೆದಿದೆ. ಮನೆಗೆ ನುಗ್ಗಿದ್ದ ಹಂತಕರು ವಿನಾಯಕ ಬಾಕಳೆ ತಂದೆ ಹಾಗೂ ಸುನಂದಾ ಬಾಕಳೆ ಬದಲಿಗೆ ಅಮಾಯಕ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ.

4. ಕೇಂದ್ರ ಸಚಿವ ಜೋಶಿ ವಿರುದ್ಧ ಸ್ಪರ್ಧಿಸಿದ್ದ ದಿಂಗಾಲೇಶ್ವರ ಶ್ರೀಗಳಿಂದ ನಾಮಪತ್ರ ವಾಪಸ್

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ್‌ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಕೇಂದ್ರ ಸಚಿವ, ಪ್ರಲ್ಹಾದ್‌ ಜೋಶಿ ಲಿಂಗಾಯತ ಸಮುದಾಯಕ್ಕೆ ಜೋಶಿ ಅನ್ಯಾಯ ಮಾಡಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ನಾಮಪತ್ರ ಸಲ್ಲಿಸುವ ವೇಳೆ ಆರೋಪಿಸಿದ್ದರು. ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ಮಹಾಸ್ವಾಮಿಗಳು ದಿಂಗಾಲೇಶ್ವರ ಸ್ವಾಮೀಜಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಿರಿ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾಗಿ ತಿಳಿಸಿದ್ದಾರೆ.

5. ಚಾಮರಾಜಪೇಟೆ ಕ್ಷೇತ್ರದಲ್ಲಿ 2 ಕೋಟಿ ರೂ ವಶಕ್ಕೆ: ಬಿಜೆಪಿ ಕಾರ್ಯದರ್ಶಿ ವಿರುದ್ಧ FIR

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇಬ್ಬರ ವಿರುದ್ಧ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕಾಟನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತನಿಖಾ ಠಾಣೆಯಲ್ಲಿ ಶನಿವಾರ ಸಂಜೆ ಕಾರು ತಪಾಸಣೆ ನಡೆಸಿದಾಗ ರೂ. 2 ಕೋಟಿ ನಗದು ಪತ್ತೆಯಾಗಿತ್ತು.

6. ವಿಜಯಪುರದಲ್ಲಿ ಕಾರು ಪಲ್ಟಿ: 3 ಸಾವು

ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಬಳಿ ನಡೆದಿದೆ. ಮೃತರ ಪೈಕಿ ಓರ್ವ 4 ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತರಾಗಿದ್ದರು. ಕಾರು ಡವಳಗಿಯಿಂದ ಮುದ್ದೇಬಿಹಾಳಕ್ಕೆ ಹೋಗುತ್ತಿದ್ದಾಗ ಕತ್ತಲಿಲ್ಲ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com