ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿ ಹೆಚ್ಚಾಗಿ ಮಹಿಳೆಯರು ತಮ್ಮ ಮಂಗಳಸೂತ್ರ ಕಳೆದುಕೊಳ್ಳುತ್ತಾರೆ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ ಹಿಂದೂಗಳು ಮಾತ್ರವಲ್ಲ ಎಲ್ಲಾ ಧರ್ಮದ ಮಹಿಳೆಯರು ದೇಶದಲ್ಲಿ ಕೋಮುಗಲಭೆ, ಗಲಾಟೆ, ದಳ್ಳುರಿಯಿಂದ ತಮ್ಮ ಗಂಡಂದಿರು, ಮಕ್ಕಳನ್ನು, ಮಂಗಳಸೂತ್ರವನ್ನು ಕಳೆದುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಹೇಳಿದ್ದಾರೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ನಿನ್ನೆ ಭಾನುವಾರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರು ತಮ್ಮ ಗಂಡಂದಿರು, ಮಕ್ಕಳನ್ನು ಸಹ ಕಳೆದುಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿ ಮಾಡುತ್ತಾರೆ. ಗಲಾಟೆ ಮಾಡಿ ಮಕ್ಕಳನ್ನು ಸಾಯುವಂತೆ ಮಾಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಬ್ಬರನ್ನೊಬ್ಬರು ಬಡಿದಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಹಿಂದುಗಳಿಗೆ ಈವರೆಗೆ ಯಾವುದೇ ಅನ್ಯಾಯ ಆಗಿಲ್ಲ. ಬಿಜೆಪಿಯವರು ಸಮಾಜವನ್ನು ಅಧಃಪತನಕ್ಕೆ ಹೋಗುವಂತೆ ಮಾಡುತ್ತಾರೆ. ಮಕ್ಕಳನ್ನು ಕೋಮುಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ. ಮತೀಯ ಭಾವನೆ ಕೆರಳಿಸುವ ರೀತಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ ಎಂದರು.
ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯತೀಂದ್ರ, ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಈ ರೀತಿ ಮಾತನಾಡುವುದಿಲ್ಲ. ಮೋದಿ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಮತೀಯ ಭಾವನೆ ಕೆರಳಿಸುವ ರೀತಿ ಮೋದಿ ಮಾತನಾಡಿದ್ದಾರೆ ಎಂದು ಯತೀಂದ್ರ ವಾಗ್ದಾಳಿ ನಡೆಸಿದರು.
ರಾಜಸ್ಥಾನದ ಬನ್ಸ್ವಾರಾದಲ್ಲಿ ನಿನ್ನೆ ಲೋಕಸಭಾ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡಲಿದೆ ಎಂದಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಇದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಮಹಿಳೆಯರಿಂದ ಮಂಗಳಸೂತ್ರಗಳನ್ನು ಕಸಿದುಕೊಂಡು ನುಸುಳುಕೋರರಿಗೆ ನೀಡಲಿದೆ ಎಂದು ಟೀಕಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ