
ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯವು ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋದ 15,611 ಕೋಟಿ ರೂ.ವೆಚ್ಚದ 3ನೇ ಹಂತದ ಯೋಜನೆಗೆ ಅನುಮತಿ ನೀಡಿದ್ದು, ಇದೀಗ ಸಂಪುಟದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏಕಕಾಲದಲ್ಲಿ 44.65 ಕಿ.ಮೀ ಉದ್ದದ ಯೋಜನೆಗೆ ಟೆಂಡರ್ ಪ್ರಕ್ರಿಯೆಗೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೆ ಮುಂಬರುವ ಎಲ್ಲಾ ಮೆಟ್ರೋ ಯೋಜನೆಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಸೂಚಿಸಿರುವ ಹೊಸ ಪ್ರಸ್ತಾವನೆಯು ಅದನ್ನು ತಡೆಹಿಡಿಯುತ್ತಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಸಾರ್ವಜನಿಕ ಹೂಡಿಕೆ ಮಂಡಳಿಯು ಯೋಜನೆಗೆ ಮೊದಲೇ ಅನುಮತಿ ನೀಡಿದ ನಂತರ, ಹಣಕಾಸು ಸಚಿವಾಲಯವು ಇತ್ತೀಚೆಗೆ ತನ್ನ ಒಪ್ಪಿಗೆಯನ್ನು ನೀಡಿದೆ. ಕಳೆದ ವಾರ, ಕೇಂದ್ರ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಅನುಮತಿಗೆ ಅನುಕೂಲವಾಗುವಂತೆ ಪ್ರಧಾನಿ ಕಾರ್ಯಾಲಯಕ್ಕೆ ನಮ್ಮ ಮೆಟ್ರೋದ ಹಂತ-3ರ ಕುರಿತು ವಿವರವಾದ ಮಾಹಿತಿ ನೀಡಿದೆ.
ಹಂತ-3 ಎರಡು ಎಲಿವೇಟೆಡ್ ಸ್ಟ್ರೆಚ್‌ಗಳನ್ನು ಒಳಗೊಂಡಿದೆ - ಒಂದು 32.15 ಕಿಮೀ ಇದ್ದು, ಹೊರವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ ಜೆಪಿ ನಗರ ನಾಲ್ಕನೇ ಹಂತವನ್ನು ಸಂಪರ್ಕಿಸುತ್ತದೆ. ಆದರೆ ಮಾಗಡಿ ರಸ್ತೆಯಲ್ಲಿನ 12.5 ಕಿಮೀ ಮಾರ್ಗವು ಹೊಸಹಳ್ಳಿ ಮತ್ತು ಕಡಬಗೆರೆಯನ್ನು ಸಂಪರ್ಕಿಸುತ್ತದೆ. ಇದು ಒಟ್ಟು 31 ನಿಲ್ದಾಣಗಳನ್ನು ಹೊಂದಿರುತ್ತದೆ.
ರಾಜ್ಯ ಸರ್ಕಾರ ಈ ವರ್ಷದ ಮಾರ್ಚ್ 14 ರಂದು ಯೋಜನೆಯ ಕಡಿಮೆ ಪರಿಷ್ಕೃತ ವೆಚ್ಚಕ್ಕೆ(16,328 ಕೋಟಿ ರೂ.ಗಳಿಂದ ಕಡಿಮೆ) ತನ್ನ ಒಪ್ಪಿಗೆಯನ್ನು ನೀಡಿದ್ದು, 2028ಕ್ಕೆ ಗಡುವನ್ನು ನಿರ್ದಿಷ್ಟಪಡಿಸಿತ್ತು.
ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವರ್ಷದ ಆರಂಭದಲ್ಲಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸಲು ಕರೆ ನೀಡಿದ್ದಾರೆ. ಹೀಗಾಗಿ ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement