
ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕ ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಘಟನೆ ಕಳೆದ ರಾತ್ರಿ ನಡೆದಿದೆ.
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಪ್ಲಾಟ್ ಫಾರ್ಮ್ 2ರಲ್ಲಿ ತನ್ನ ಒಡಹುಟ್ಟಿದವರೊಂದಿಗೆ ನಾಲ್ಕು ವರ್ಷದ ಬಾಲಕ ಆಟವಾಡುತ್ತಿದ್ದ. ಆಕಸ್ಮಿಕವಾಗಿ ಜಾರಿ ಕೆಳಗೆ ಹಳಿ ಮೇಲೆ ಬಿದ್ದಿದ್ದಾನೆ. ಇದನ್ನು ಗಮನಿಸಿ ಕೂಡಲೇ ತುರ್ತುರೈಲು ನಿಲುಗಡೆ ವ್ಯವಸ್ಥೆಯ ಮೂಲಕ ನಿಲ್ದಾಣದ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಪ್ಲಾಟ್ ಫಾರ್ಮ್ 1 ಮತ್ತು 2ರಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಯಿತು.
ಹಳಿಯ ಮೇಲೆ ಬಿದ್ದ ಬಾಲಕನನ್ನು ತಕ್ಷಣವೇ ಭದ್ರತಾ ಸಿಬ್ಬಂದಿ ಸಹಾಯದಿಂದ ಪ್ಲಾಟ್ ಫಾರ್ಮ್ ಗೆ ಕರೆತರಲಾಯಿತು. ಕಂಟ್ರೋಲ್ ರೂಂಗೆ ಕರೆತಂದು ಬಾಲಕನನ್ನು ಪರೀಕ್ಷಿಸಿದಾಗ ಎಡಕಿವಿ ಮೇಲೆ ಗಾಯವಾಗಿದ್ದು ಬಿಟ್ಟರೆ ಹೆಚ್ಚಿನ ತೊಂದರೆಗಳೇನು ಆಗಿರಲಿಲ್ಲ.
ಹೆಚ್ಚಿನ ಚಿಕಿತ್ಸೆಗಾಗಿ ಮೆಟ್ರೋ ಭದ್ರತಾ ಸಿಬ್ಬಂದಿಯ ಜೊತೆಗೆ ತಾಯಿ ಮತ್ತು ಬಾಲಕನನ್ನು ಸರ್ ಸಿ ವಿ ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ತಿಳಿಸಿದರು. ಹಾಗೂ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಲ್ಲಿ ಸ್ಕಾನಿಂಗ್ ಮಾಡಿದಾಗ ಯಾವುದೇ ಅಸಹಜತೆ ಕಂಡುಬಂದಿಲ್ಲ. ಹೀಗಾಗಿ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಎಲ್ಲಾ ಕ್ಲಿಯರೆನ್ಸ್ ಮಾಡಿದ ನಂತರ ರಾತ್ರಿ 9.15ರ ಹೊತ್ತಿಗೆ ರೈಲು ಸೇವೆ ಪುನರಾರಂಭಗೊಂಡಿತು.
Advertisement