
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡದೆ ಬೇರೆ ದಾರಿಯಿಲ್ಲ ಎಂದು ದೂರುದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಐಎಎನ್‌ಎಸ್‌ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರಿಗೆ ಅನುಮತಿ ನೀಡದೆ ಬೇರೆ ದಾರಿಯಿಲ್ಲ. ನಾನು ಆಶಾವಾದಿಯಾಗಿದ್ದೇನೆ. ದೂರಿನಲ್ಲಿ ಏನೂ ಇಲ್ಲ ಎಂದಾದರೆ ಕರ್ನಾಟಕ ಸರ್ಕಾರ ಮೂರು ಗಂಟೆಗಳ ಕಾಲ ಸಚಿವ ಸಂಪುಟ ಸಭೆ ನಡೆಸಿದ್ದು ಯಾಕೆ? 10 ರಿಂದ 12 ಸಂಪುಟ ಸಚಿವರು ಸುದ್ದಿಗೋಷ್ಠಿ ನಡೆಸಿದ್ದು ಏಕೆ? ನನ್ನ ದೂರಿನಲ್ಲಿ ಯಾವುದೇ ವಿಷಯ ಇಲ್ಲದಿದ್ದರೆ, ಈ ರೀತಿಯ ಗೊಂದಲಕಾರಿ ನಡೆಯನ್ನು ಏಕೆ ನೋಡುತ್ತಿದ್ದೇವೆ? ಎಂದು ಪ್ರಶ್ನಿಸಿದರು.
ನೋಟಿಸ್ ಹಿಂಪಡೆಯಲು ಮತ್ತು ದೂರನ್ನು ತಿರಸ್ಕರಿಸುವಂತೆ ಸರ್ಕಾರ ರಾಜ್ಯಪಾಲರಿಗೆ ಸಲಹೆ ನೀಡಿದೆ. ಆದರೆ ಅವರ ಸಲಹೆಗೆ ರಾಜ್ಯಪಾಲರು ಬದ್ಧರಾಗುತ್ತಾರೆಯೇ? ಎಂದು ಪ್ರಶ್ನಿಸಿದ ಅಬ್ರಹಾಂ, ರಾಜ್ಯಪಾಲರು ಕಾಯ್ದೆಗೆ ಬದ್ಧರಾಗಿರುತ್ತಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದಾಗ ರಾಜ್ಯಪಾಲರು ಯಾರ ವಿರುದ್ಧ ಆರೋಪ ಮಾಡಲಾಗುತ್ತಿದೆಯೋ ಆ ವ್ಯಕ್ತಿಗೆ ನೋಟಿಸ್ ಮತ್ತು ಅವಕಾಶವನ್ನು ನೀಡಬೇಕು. ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಭ್ರಷ್ಟಾಚಾರ ತಡೆ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.
"ಇದು ಸ್ಪಷ್ಟವಾದ ಪ್ರಕರಣವಾಗಿದೆ. ಅವರಿಗೆ ಮನವರಿಕೆಯಾಗಿರುವುದರಿಂದ ಅನುಮತಿ ನೀಡಬೇಕು. ಪ್ರಕರಣ ಸರಳವಾಗಿದೆ, ಕೃಷಿ ಭೂಮಿ ಇಲ್ಲದಿರುವಾಗ, ಕೃಷಿ ಭೂಮಿಯನ್ನು ಹೇಗೆ ಖರೀದಿಸಿದ್ದೀರಿ? ಅದು ಹೇಗೆ ನಿಮ್ಮ ಭೂಮಿಯಾಯಿತು? ಆ ಭೂಮಿ ಬೇರೊಬ್ಬರಿಗೆ ಸೇರಿರುವುದರಿಂದ ನೀವು ಅದರ ಮೇಲೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ. ಆ ಜಮೀನಿನಲ್ಲಿ ನಿವೇಶನಗಳು ಬೇರೆಯವರ ಹೆಸರಿನಲ್ಲಿವೆ ಎಂದು ಮುಖ್ಯಮಂತ್ರಿ ಹೆಸರು ಪ್ರಸ್ತಾಪಿಸದೇ ಅಬ್ರಹ್ರಾಂ ಟೀಕಾ ಪ್ರಹಾರ ನಡೆಸಿದರು.
ರಾಜಕೀಯ ನಾಯಕರ ವಿರುದ್ಧ ದೂರುಗಳನ್ನು ಸಲ್ಲಿಸುವ ಅಭ್ಯಾಸವಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅಬ್ರಹಾಂ, ಆರೋಪದ ಮೇಲೆ, ಹಲವಾರು ದೂರುಗಳನ್ನು ನೀಡಿದ್ದೇನೆ, ನನ್ನ ವಿರುದ್ಧವೂ ಆರೋಪಗಳಿವೆ. ಜನರು ಸುಳ್ಳು ಆರೋಪ ಮಾಡಿದ್ದಾರೆ. ಅವು ಸುಳ್ಳು ಅಥವಾ ಇಲ್ಲವೇ ಎಂಬುದನ್ನು ನಾನು ಪ್ರಮಾಣೀಕರಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನ್ಯಾಯಾಲಯಗಳು ನಿರ್ಧರಿಸಬೇಕು ಮತ್ತು ಅದಕ್ಕಾಗಿಯೇ ಕಾಯುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಮಾಡಿರುವ ಆರೋಪದಲ್ಲಿ ಏನಾದರೂ ತಪ್ಪಿದೆಯೇ? ಅಥವಾ ಅಕ್ರಮವೇ? ಎಂಬುದರ ಬಗ್ಗೆಕಾಂಗ್ರೆಸ್ ನಾಯಕರಲ್ಲಿ ಉತ್ತರವಿಲ್ಲಾ ಎಂದು ಅವರು ಹೇಳಿದರು.
Advertisement