ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದು ಹಾಗೂ ಅದಕ್ಕೆ ಡಿಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವರ್ಸಸ್ ರಾಜಭವನದ ನಡುವೆ ಸಂಘರ್ಷದ ವಾತಾವರಣವನ್ನು ಸೃಷ್ಟಿ ಮಾಡಿದೆ. ಈ ಬೆಳವಣಿಗೆ ನಡುವಲ್ಲೇ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ರಾಜ್ಯಪಾಲರಿಂದ ಬಂದಿರುವ ಶೋಕಾಸ್ ನೋಟಿಸ್'ಗೆ ಈಗಾಗಲೇ ಸಂಪುಟ ಸಚಿವರು ಉತ್ತರ ನೀಡಿದ್ದಾರೆ. ಪ್ರತ್ಯುತ್ತರವನ್ನು ಸಂಪುಟ ಸಿದ್ಧಪಡಿಸಿದ್ದು, ನೋಟಿಸ್ ಹಿಂಪಡೆಯುವಂತೆ ಹಾಗೂ ಅಬ್ರಹಾಂ ನೀಡಿದ ದೂರನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ಹೇಳಿದರು. ರಾಜ್ಯಪಾಲರು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್‌ನ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಹೇಳಿದರು.
ಮುಡಾ ಹಗರಣ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಳೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ಮೈಸೂರು ಚಲೋ ಪಾದಯಾತ್ರೆಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಿದ್ದೇವೆ ಎಂದರು.
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕ ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಘಟನೆ ಕಳೆದ ರಾತ್ರಿ ನಡೆದಿದೆ. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಪ್ಲಾಟ್ ಫಾರ್ಮ್ 2ರಲ್ಲಿ ತನ್ನ ಒಡಹುಟ್ಟಿದವರೊಂದಿಗೆ ನಾಲ್ಕು ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಕೆಳಗೆ ಹಳಿ ಮೇಲೆ ಬಿದ್ದಿದ್ದಾನೆ. ಇದನ್ನು ಗಮನಿಸಿ ಕೂಡಲೇ ತುರ್ತುರೈಲು ನಿಲುಗಡೆ ವ್ಯವಸ್ಥೆಯ ಮೂಲಕ ನಿಲ್ದಾಣದ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಪ್ಲಾಟ್ ಫಾರ್ಮ್ 1 ಮತ್ತು 2ರಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಯಿತು. ಹಳಿಯ ಮೇಲೆ ಬಿದ್ದ ಬಾಲಕನನ್ನು ತಕ್ಷಣವೇ ಭದ್ರತಾ ಸಿಬ್ಬಂದಿ ಸಹಾಯದಿಂದ ಪ್ಲಾಟ್ ಫಾರ್ಮ್ ಗೆ ಕರೆತರಲಾಯಿತು. ಎಡಕಿವಿ ಮೇಲೆ ಗಾಯವಾಗಿದ್ದು ಬಿಟ್ಟರೆ ಬಾಲಕನಿಗೆ ಹೆಚ್ಚಿನ ತೊಂದರೆಗಳೇನು ಆಗಿರಲಿಲ್ಲ.
ಬೆಂಗಳೂರು ಇಂಡಿಯಾ ನ್ಯಾನೋ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ'ವನ್ನು ಸರ್ಕಾರ ಶೀಘ್ರದಲ್ಲೇ ಆಯೋಜಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 13ನೇ ಬೆಂಗಳೂರು ನ್ಯಾನೋ ತಂತ್ರಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಮನುಷ್ಯನ ಭವಿಷ್ಯದ ಬದುಕಿಗೆ ಪೂರಕವಾಗಿ ಇರಬೇಕು. ಈ ತಂತ್ರಜ್ಞಾನದಿಂದ ಕೃಷಿ, ವಿದ್ಯುತ್, ಆಹಾರ ಸಂಸ್ಕರಣೆ, ಕೈಗಾರಿಕಾ ಕ್ಷೇತ್ರಗಳಲ್ಲಿ ಕಡಿಮೆ ದರದಲ್ಲಿ ಹೆಚ್ಚು ಉತ್ಪಾದನೆ ಮಾಡಿ ಜನಸ್ನೇಹಿಯಾಗಿಸಬೇಕಿದೆ ಎಂದರು.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತೆಂಕಿಲ ಬಪ್ಪಳಿಗೆಯ ಬೈಪಾಸ್ ನಲ್ಲಿ ಶುಕ್ರವಾರ ಮುಂಜಾನೆ ಗುಡ್ಡ ಕುಸಿತಗೊಂಡು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದ್ದು, ಆ ವೇಳೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಈ ಮಧ್ಯೆ, ವಾರಕ್ಕೆ ಮೂರು ಬಾರಿ ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ರೈಲಿನ ವೇಳಾಪಟ್ಟಿಯನ್ನು ಬದಲಾಗಿದೆ. ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ.
ಕಾಪಿರೈಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ ಅವರು ಶುಕ್ರವಾರ ಯಶವಂತಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು, ನಟನನ್ನು ಪೊಲೀಸರು 1 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನ್ಯಾಯ ಎಲ್ಲಿದೆ ಚಿತ್ರದ ‘ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.
Advertisement