
ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಶುಕ್ರವಾರ ಕೊಡಗು ಜಿಲ್ಲೆಯಲ್ಲಿ ಮಳೆ, ಪ್ರವಾಹ ಪೀಡಿತ ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಈ ಹಿಂದೆ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಿತ್ತು. ಆದರೆ ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರು ಅಂತಿಮ ಸಭೆ ನಡೆಸುವ ಮೊದಲು ವರದಿಯ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಎಂದು ಸೂಚಿಸಿದ್ದಾರೆ. ನಾವು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಮಳೆ ಕಡಿಮೆಯಾದ ನಂತರ ಮಳೆಯಿಂದ ಅನಾಹುತಕ್ಕೀಡಾದ ಪ್ರದೇಶಗಳಲ್ಲಿ ತಮ್ಮ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಮಳೆ ಮತ್ತು ಪ್ರವಾಹದಲ್ಲಿ ಮನೆ ಸಂಪೂರ್ಣ ಹಾನಿಗೊಳಗಾದ ಕುಟುಂಬಗಳಿಗೆ 1.2 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವು ಮನೆಗಳನ್ನು ನಿರ್ಮಿಸಿಕೊಡಲಿದೆ ಎಂದು ಹೇಳಿದರು. ಮನೆಗಳು ಭಾಗಶಃ ಹಾನಿಗೊಳಗಾದ ಕುಟುಂಬಗಳಿಗೆ 50,000 ರೂಪಾಯಿ ಸರ್ಕಾರ ನೆರವು ನೀಡಲಿದೆ ಎಂದರು.
ಈ ಮುಂಗಾರು ಹಂಗಾಮಿನಲ್ಲಿ ಕೊಡಗಿನಲ್ಲಿ ಶೇ.50ರಷ್ಟು ಅಧಿಕ ಮಳೆಯಾಗಿದೆ ಎಂದು ಮಾಹಿತಿ ನೀಡಿದ ಸಿಎಂ, ಜಿಲ್ಲೆಯ 10 ಪರಿಹಾರ ಕೇಂದ್ರಗಳಲ್ಲಿ 186 ಮಂದಿ ವಾಸವಾಗಿದ್ದಾರೆ. ಕೊಡಗಿನಲ್ಲಿ ಹದಿನಾಲ್ಕು ಕೇಂದ್ರಗಳನ್ನು ತೆರೆಯಲಾಗಿದೆ. ಬೆಳೆ ನಷ್ಟ ಸಮೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು. ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಕಾಫಿ ಎಸ್ಟೇಟ್‌ಗಳಲ್ಲಿ ಆಗಿರುವ ಹಾನಿಯನ್ನು ಅಂದಾಜಿಸಲಿದೆ ಎಂದು ಹೇಳಿದರು. ಎಲ್ಲ ಜಿಲ್ಲೆಗಳ ಪಿಡಿ ಖಾತೆಗೆ 763 ಕೋಟಿ ರೂಪಾಯಿ, ಕೊಡಗು ಜಿಲ್ಲೆಯ ಪಿಡಿ ಖಾತೆಗೆ 43 ಕೋಟಿ ಜಮಾ ಮಾಡಲಾಗಿದೆ. ಅಗತ್ಯಬಿದ್ದರೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎರಡು ಭೂಕುಸಿತ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ಭೂಕುಸಿತಕ್ಕೆ ತುತ್ತಾಗುವ ಮಂಚಳ್ಳಿಯಲ್ಲಿ ತೂಗು ಸೇತುವೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಸಚಿವ ಎನ್.ಎಸ್.ಬೋಸರಾಜು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಮತ್ತಿತರರು ಮುಖ್ಯಮಂತ್ರಿ ಜತೆಗಿದ್ದರು.
Advertisement