ಯಾದಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ದಲಿತರು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ ಐ ಪರುಶುರಾಮ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಸೋಮನಾಳ ಗ್ರಾಮದಲ್ಲಿ ಭಾನುವಾರ ಪರಶುರಾಮ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಅಧಿಕಾರಿಗಳ ಸಾವಾಗುತ್ತಿದೆ. ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ನಂತರ ಈಗ ಪಿಎಸ್ ಐ ಪರಶುರಾಮ್ ಸಾವಾಗಿದೆ. ನಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಯಾದಗಿರಿ ಶಾಸಕರು ಹೇಳಿದ್ದಾರೆಂದು ಪರಶುರಾಮ್ ಕುಟುಂಬದವರು ಆರೋಪಿಸಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿಯೇ ನಾವೆಲ್ಲರೂ ಬದುಕುತ್ತಿದ್ದರೂ ಈ ರೀತಿಯ ಹೇಯ ಕೃತ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳನ್ನು ಎರಡು ವರ್ಷದ ಒಳಗೆ ವರ್ಗಾವಣೆ ಮಾಡಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಪಕ್ಷದವರು ಒಂದು ವರ್ಷಕ್ಕೆ ಇಳಿಸಿದ್ದಾರೆ. ಠಾಣೆಗೆ ಬಂದು ಏಳು ತಿಂಗಳಾಗುವಷ್ಟರಲ್ಲಿ ಪರಶುರಾಮ್ ಅವರನ್ನು ವರ್ಗಾವಣೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ ಅವರು ವರ್ಗಾವಣೆ ಮಾಡಿದ ಅಧಿಕಾರಿ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಶುರಾಮ್ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ನೀಡಿ ಕಣ್ಣೊರೆಸುವ ತಂತ್ರವಾಡುತ್ತಿದೆ. ಸಿಐಡಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ವಹಿಸಬೇಕು, ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿರುವ ಯಾದಗಿರಿ ಶಾಸಕ ಹಾಗೂ ಅವರ ಪುತ್ರನನ್ನು ಬಂಧಿಸಬೇಕು, ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement