
ಮಡಿಕೇರಿ: ನಿರಂತರ ಮಳೆಯಿಂದಾಗಿ ಕೊಡಗಿನಲ್ಲಿ ದಿನಗೂಲಿ ಕೆಲಸ ಸಿಗದೆ, ಸುಮಾರು ಮೂರು ವಾರಗಳ ಹಿಂದೆ ಕೊಡಗಿನ ದಂಪತಿ ಜೀವನ ಸಾಗಿಸಲೆಂದು ವಯನಾಡಿಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ನಿರಂತರ ಮಳೆಯಿಂದಾಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದರಿಂದ ಅವರು ತಮ್ಮ ಮಗನನ್ನು ಕರೆದುಕೊಂಡು ಹೋಗಿದ್ದರು. ಆದರೆ, ಬಡ ಕುಟುಂಬದಲ್ಲಿ ಗುಡುಗು ಸಿಡಿಲಿನಂತೆ ಭೂಕುಸಿತ ದುರಂತ ಸಂಭವಿಸಿ ಮೆಪ್ಪಾಡಿ ವಯನಾಡ್ ದುರಂತದಲ್ಲಿ ತಾಯಿ ತನ್ನ ಮಗನನ್ನು ಕಳೆದುಕೊಂಡಿರುವ ಕರುಣಾಜನಕ ಕಥೆಯಿದು.
ಕವಿತಾ ಮತ್ತು ರವಿ ಕೊಡಗಿನಲ್ಲಿ ನೆಲೆಸಿರುವ ದಂಪತಿ. ರವಿ ತಮಿಳುನಾಡಿನವರಾಗಿದ್ದರೆ, ಕವಿತಾ ಹುಟ್ಟಿ ಬೆಳೆದದ್ದು ಕೊಡಗಿನಲ್ಲಿ. ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ರೋಹಿತ್, ಒಂಬತ್ತು ವರ್ಷದ ಅವರ ಕಿರಿಯ ಮಗ. ಕೊಡಗಿನ ಗುಹ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದನು.
ಸುಮಾರು ಮೂರು ವಾರಗಳ ಹಿಂದೆ ಕವಿತಾ ಮತ್ತು ರೋಹಿತ್ ವಯನಾಡಿಗೆ ತೆರಳಿದ್ದರು. “ನಾವು ದಿನಗೂಲಿಗಳು. ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನಮಗೆ ಕೆಲಸ ಸಿಗುತ್ತಿರಲಿಲ್ಲ. ಸಾಲ ಕೂಡ ಇದೆ ಎಂದು ಕೆಲಸ ಹುಡುಕಿಕೊಂಡು ವಯನಾಡ್ ಗೆ ಹೋಗಿದ್ದೆವು ಎಂದು ರವಿ ಹೇಳುತ್ತಾರೆ.
ಕವಿತಾ ಅವರ ಸಹೋದರಿಯರು ವಯನಾಡಿನಲ್ಲಿ ನೆಲೆಸಿದ್ದಾರೆ. ಒಬ್ಬ ಸಹೋದರಿ ಕವಿತಾಗೆ ಉದ್ಯೋಗವನ್ನು ಹುಡುಕಿ ಕರೆಸಿಕೊಂಡಿದ್ದರು. ಅವಶ್ಯಕತೆಗಳನ್ನು ಪೂರೈಸುವುದು ಕಷ್ಟಕರವಾದ ಕಾರಣ, ಕವಿತಾ ಕೇರಳದ ಕೋಝಿಕ್ಕೋಡ್‌ನಲ್ಲಿ ಮನೆಕೆಲಸವನ್ನು ತೆಗೆದುಕೊಂಡರು. ಆಕೆಗೆ ತಿಂಗಳಿಗೆ 20,000 ರೂಪಾಯಿ ಸಿಗುತ್ತಿತ್ತು ಎಂದು ವಿವರಿಸಿದರು. ಕೋಝಿಕ್ಕೋಡ್‌ಗೆ ಹೋಗುವ ಮೊದಲು ಕವಿತಾ ತನ್ನ ಸಹೋದರಿಯನ್ನು ಭೇಟಿ ಮಾಡಲು ರೋಹಿತ್ ಜೊತೆಗೆ ಮೆಪ್ಪಾಡಿಗೆ ಪ್ರಯಾಣ ಬೆಳೆಸಿದಳು. ಅವಳು ರೋಹಿತ್‌ನನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಕೋಝಿಕ್ಕೋಡ್ ಗೆ ಕೆಲಸಕ್ಕೆ ಹೋಗಿದ್ದಳು.
ಕವಿತಾರ ತಂದೆ ಅನಾರೋಗ್ಯಕ್ಕೀಡಾದಾಗ ಅವರ ಸಹೋದರಿ ಅವರನ್ನು ಪೋಷಿಸಲು ತಮಿಳುನಾಡಿಗೆ ತೆರಳಿದರು. ರೋಹಿತ್ ತನ್ನ ಚಿಕ್ಕಪ್ಪ ಮತ್ತು ಸೋದರಸಂಬಂಧಿಯೊಂದಿಗೆ ಮೆಪ್ಪಾಡಿಯಲ್ಲಿ ಇದ್ದನು. ಕವಿತಾ ಮತ್ತು ರೋಹಿತ್ ಮಂಗಳವಾರ ಕೊಡಗಿಗೆ ಮರಳಿದ್ದರು. ಆದರೆ, ದಂಪತಿಗೆ ರೋಹಿತ್ ಮೃತದೇಹವನ್ನು ಮನೆಗೆ ತರಲು ಸಾಧ್ಯವಾಗಲಿಲ್ಲ.
ಕಳೆದ ಮಂಗಳವಾರ ಬೆಳಗ್ಗೆ ಭೂಕುಸಿತ ದುರಂತದ ಸುದ್ದಿ ನೋಡಿದ ನಂತರ ತಕ್ಷಣವೇ ಮೆಪ್ಪಾಡಿಗೆ ಹೊರಟೆ. ನಾನು ಬಸ್ಸಿನಲ್ಲಿದ್ದಾಗ ಕೇರಳದ ಅಧಿಕಾರಿಯೊಬ್ಬರಿಂದ ನನಗೆ ಕರೆ ಬಂತು. ನಾನು ಬಸ್ಸಿನಲ್ಲಿ ಕೇರಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದಾಗ, ಫೋನ್ ನ್ನು ಬಸ್ ಕಂಡಕ್ಟರ್ ಗೆ ಕೊಡಲು ಹೇಳಿದರು. ಆ ನಂತರ ಬಸ್ ಡ್ರೈವರ್ ನನ್ನನ್ನು ಮಾನಂತವಾಡಿಯಲ್ಲಿ ಇಳಿಸಿದರು ಎನ್ನುತ್ತಾರೆ ರವಿ.
ಮಾನಂತವಾಡಿಯಲ್ಲಿ ರವಿಗಾಗಿ ಕಾರೊಂದು ಕಾದು ನಿಂತಿದ್ದು, ನೇರವಾಗಿ ಮೆಪ್ಪಾಡಿ ಭೂಕುಸಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ರೋಹಿತ್‌ನ ಛಿದ್ರಗೊಂಡ ದೇಹ ಸೇರಿದಂತೆ ಮೂರು ಮೃತದೇಹಗಳನ್ನು ಗುರುತಿಗಾಗಿ ಮುಂದೆ ತಂದಿಟ್ಟರು.
ಆಕಾಶವೇ ಕಳಚಿಬಿದ್ದಂತಾಯಿತು. ನಾನು ನನ್ನ ಮಗನ ದೇಹವನ್ನು ಮುಟ್ಟಿದಾಗ ತುಂಬಾ ಮೃದುವಾಗಿತ್ತು. ಮೃತದೇಹವನ್ನು ಕೊಡಗಿಗೆ ತರಲು ಸಾಧ್ಯವಾಗದೆ ಮೆಪ್ಪಾಡಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದೇವೆ ಎಂದು ದಂಪತಿ ಕಣ್ಣೀರು ಸುರಿಸುತ್ತಾ ಹೇಳುತ್ತಾರೆ. ಕವಿತಾಗೆ ಉತ್ತಮ ಸಂಬಳದ ಮನೆಕೆಲಸ ಸಿಕ್ಕಿದ ನಂತರ ಉತ್ತಮ ಜೀವನ ಆಶಿಸಿದ್ದರೆ, ಈಗ ಅವರ ಸಂತೋಷ ಮಾಯವಾಗಿದೆ. ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದಾರೆ.
Advertisement