ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು; ಇಂದಿನಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ವರ್ಗಾವಣೆ; ಮದುವೆಯಾಗುವುದಾಗಿ ವಂಚನೆ ಶಿವಮೊಗ್ಗ BJP ಮುಖಂಡನ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 06-08-24

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು; ಇಂದಿನಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ವರ್ಗಾವಣೆ; ಮದುವೆಯಾಗುವುದಾಗಿ ವಂಚನೆ ಶಿವಮೊಗ್ಗ BJP ಮುಖಂಡನ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 06-08-24

1. ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ. ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದಾಖಲೆ ಸಮೇತ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವವರು ದೂರು ನೀಡಿದ್ದು, ಸಿಎಂ ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 1979ರಲ್ಲಿ ಮೈಸೂರಿನ ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ 1.39 ಎಕರೆ ಜಮೀನನ್ನು ಮರಪ್ಪ ಎಂಬುವವರ ಹೆಸರಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

2. ಮುಡಾ ಹಗರಣ: ರಾಜ್ಯಪಾಲರನ್ನು ಭೇಟಿಯಾದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಇಂದು ಮತ್ತೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಗೆ ತೆರಳಿದ್ದ ಗವರ್ನರ್ ನಿನ್ನೆ ಬೆಂಗಳೂರಿಗೆ ವಾಪಸ್ ಆದರು. ಈ ಬೆನ್ನಲ್ಲೇ ಅಬ್ರಾಹಂ ಅವರು ರಾಜಭವನಕ್ಕೆ ತೆರಳಿ ಪ್ರಕರಣ ಸಂಬಂಧ ಮತ್ತಷ್ಟು ವಿವರಣೆ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ, ನನ್ನ ಬಳಿ ಮತ್ತಷ್ಟು ಸ್ಪಷ್ಟೀಕರಣ ಕೇಳಿದ್ದಾರೆ. ಕಳೆದ ಬಾರಿ ಕೇಳಿದ ದಾಖಲೆಗಳ ಬಗ್ಗೆ ಮತ್ತೆ ಮಾತಾಡಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

3. ಇಂದಿನಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ವರ್ಗಾವಣೆ

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ನಿಂತು ಹೋಯಿತಾ ಎಂಬ ಅನುಮಾನಗಳು ಮೂಡಿದ್ದವು. ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು ಫಲಾನುಭವಿಗಳ ಖಾತೆಗೆ ಇಂದಿನಿಂದ ಹಣ ಜಮೆಯಾಗುತ್ತದೆ ಎಂದು ಹೇಳುವ ಮೂಲಕ ಊಹಾಪೋಗಳಿಗೆ ತೆರೆ ಎಳೆದಿದ್ದಾರೆ. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಹೆಬ್ಬಾಳ್ಕರ್, ಕಳೆದ ಎರಡು ತಿಂಗಳಿಂದ ಹಣ ಸಿಗುತ್ತಿಲ್ಲ ಎಂದು ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದರು. ಕೆಲವು ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ತಿಂಗಳ ಗ್ಯಾರಂಟಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು. ಮತ್ತೊಂದೆಡೆ ಗೃಹ ಜ್ಯೋತಿ ಯೋಜನೆಯ ಸಮರ್ಪಕ ಮುಂದುವರಿಕೆಗಾಗಿ ರಾಜ್ಯದ ಆರು ವಿದ್ಯುತ್ ಸರಬರಾಜು ಕಂಪನಿಗಳ ಖಾತೆಗಳಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ 8,844 ಕೋಟಿ ರೂ. ಹಣ ಪಾವತಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

4. ಮದುವೆಯಾಗುವುದಾಗಿ ನಂಬಿಸಿ ವಂಚನೆ: ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಎಂಬಾತನ ಬಂಧನ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಮೋಸದ ಜೊತೆಗೆ ಸಂತ್ರಸ್ತೆಯಿಂದ 4 ಲಕ್ಷ ರೂ. ಹಣ ಪಡೆದು ಹಿಂದಿರುಗಿಸದೆ ವಂಚಿಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖ ಸದಸ್ಯನಾಗಿದ್ದ ಶರತ್ ವಿರುದ್ಧ ಜುಲೈ 26ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಶರತ್ ತಲೆಮರೆಸಿಕೊಂಡಿದ್ದನು. ಇದೀಗ ಶರತ್ ವಿಜಯಪುರದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

5. ರಾಜ್ಯದಲ್ಲಿ ಎರಡು ಬಸ್ ಗಳು ಅಗ್ನಿಗಾಹುತಿ

ರಾಜ್ಯದಲ್ಲಿ ಎರಡು ಬಸ್ ಗಳು ಅಗ್ನಿಗಾಹುತಿಯಾಗಿರುವ ಘಟನೆಗಳು ನಡೆದಿದ್ದು ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯಿಂದ ಪಾರಾಗಿದ್ದಾರೆ. ನಾಗವಾರ-ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬೆಂಕಿಗಾಹುತಿಯಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನ ಇಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮತ್ತೊಂದೆಡೆ ಶಿವಮೊಗ್ಗದಲ್ಲಿ ಚಲಿಸುತ್ತಿದ್ದ KSRTC ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇಡೀ ಬಸ್ ಅಗ್ನಿಗಾಹುತಿಯಾಗಿದೆ. ಶಿವಮೊಗ್ಗದ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಈ ಘಟನೆ ಸಂಭವಿಸಿದ್ದು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com