ಗೃಹ ಸಚಿವ ಜಿ ಪರಮೇಶ್ವರ ಅವರು ಕಲಬುರ್ಗಿ ಜಿಲ್ಲೆಯ ಯಾದಗಿರಿ ನಗರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ ಅವರ ಕುಟುಂಬಕ್ಕೆ ಬುಧವಾರ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಕೊಪ್ಪಳ ಜಿಲ್ಲೆಯ ಸೋಮನಾಳ ಗ್ರಾಮದ ಮೃತ ದಲಿತ ಪೊಲೀಸ್ ಅಧಿಕಾರಿಯ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ''ಎಸ್‌ಐ ಪತ್ನಿಗೆ ಕೆಲಸ ಕೊಡಿಸುತ್ತೇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಜೆಸ್ಕಾಂ) ಕೆಲಸ ಕೇಳಿದ್ದರು. ಉದ್ಯೋಗ ಕಲ್ಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ಮಾತನಾಡುತ್ತೇನೆ. ಗೃಹ ಇಲಾಖೆಯಿಂದ ₹ 50 ಲಕ್ಷ ಪರಿಹಾರ ನೀಡುತ್ತೇವೆ ಎಂದು ಪರಮೇಶ್ವರ ಹೇಳಿದರು.
ಬೆಂಗಳೂರಿನ ಹೊರವಲಯ ನೆಲಮಂಗಲದ ಬಳಿ ನಡೆದ ರಸ್ತೆ ಅಪಘಾತದಲ್ಲಿ, ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಬಲಿಯಾಗಿದ್ದಾರೆ. ಟಿಪ್ಪರ್ ಮೈಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಹೊರಗೆ ಬಂದು ಅಸುನೀಗಿದೆ. ಮೃತ ಮಹಿಳೆಯನ್ನು ಎಡೇಹಳ್ಳಿ ಗ್ರಾಮದ ಸಿಂಚನ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್ ನಲ್ಲಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿ ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮುಡಾ ಅಕ್ರಮ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಇಂದು ಹಾಸನದ ಮಾಜಿ ಶಾಸಕ, ಬಿಜೆಪಿ ನಾಯಕ ಪ್ರೀತಂ ಗೌಡ ಪಾಲ್ಗೊಂಡಿದ್ದರು. ಈ ವೇಳೆ ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಪ್ರೀತಂ ಗೌಡ ಬೆಂಬಲಿಗರು, ಗೌಡರ ಗೌಡ ಪ್ರೀತಂ ಗೌಡ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಕೌಂಟರ್ ಕೊಡಲು ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಪರ ಘೋಷಣೆ ಕೂಗಿದ್ದಾರೆ. ನಂತರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ತಾರಕಕ್ಕೆ ಏರಿ ರಸ್ತೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದರು. ಇದರಿಂದ ಕೆಲ ಹೊತ್ತು ತಳ್ಳಾಟ, ನೂಕಾಟವಾಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರೀತಂ ಗೌಡ ಮತ್ತು ಅವರ ಬೆಂಬಲಿಗರನ್ನು ಸ್ಥಳದಿಂದ ಕಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಗೋವಾದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಬುಧವಾರದ ಬೆಳಗಿನ ಜಾವ ಕುಸಿದು ಬಿದ್ದ ಪರಿಣಾಮ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ರಾತ್ರಿ 1.30 ರ ಸುಮಾರಿಗೆ ಟ್ರಕ್ ದಾಟುತ್ತಿದ್ದಾಗ ಸೇತುವೆಯು ಕುಸಿದಿದೆ. ವಾಹನದ ಚಾಲಕ ತಮಿಳುನಾಡು ಮೂಲದ ಬಾಲ ಮುರುಗನ್ (37) ಗಾಯಗೊಂಡಿದ್ದಾನೆ ಎಂದು ಕಾರವಾರ ಪೊಲೀಸರು ತಿಳಿಸಿದ್ದಾರೆ. ನದಿಗೆ ಬಿದ್ದಿದ್ದ ಟ್ರಕ್ ಮೇಲೆ ಚಾಲಕ ಆಶ್ರಯ ಪಡೆದಿದ್ದ. ಸ್ಥಳೀಯ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ. ಘಟನೆಯಿಂದ ಹೊಸ ಸೇತುವೆ ಮೇಲೆ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ಭಾರೀ ವಾಹನಗಳನ್ನು ಹೊರತುಪಡಿಸಿ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಕಾರವಾರ ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರುವ ಸ್ನೇಹಂ ಟೇಪ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತ ರೂ. ನಷ್ಟ ಸಂಭವಿಸಿದೆ. ಈ ಘಟನೆಯಲ್ಲಿ ಮಾರ್ಕಂಡೇಯ ನಗರ ನಿವಾಸಿ 19 ವರ್ಷದ ಯಲ್ಲಪ್ಪ ಗುಂಡ್ಯಾಗೋಳ ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ 7 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ತೀವ್ರಗೊಂಡು ಇಡೀ ಕಾರ್ಖಾನೆಯನ್ನು ವ್ಯಾಪಿಸಿದ್ದು, ಬೆಂಕಿಯನ್ನು ನಂದಿಸಲು ಇಡೀ ರಾತ್ರಿ 8 ಅಗ್ನಿ ಶಾಮಕ ವಾಹನಗಳು, ಖಾಸಗಿ ನೀರಿನ ಟ್ಯಾಂಕರ್ಗಳು ಶ್ರಮಿಸಿದ್ದವು. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 10 ಲಕ್ಷ ಪರಿಹಾರ ಮತ್ತು ಕುಟುಂಬಸ್ಥರಲ್ಲಿ ಒಬ್ಬರಿಗೆ ಕೆಲಸ ಕೊಡುವುದಾಗಿ ಕಾರ್ಖಾನೆ ಮಾಲೀಕರು ಹೇಳಿದ್ದಾರೆ.
Advertisement