ಆಂಧ್ರ DCM ಪವನ್ ಕಲ್ಯಾಣ್-ಸಿಎಂ ಭೇಟಿ, ಇಂದಿನಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ; ದರ್ಶನ್ ಗೆ ಮನೆಯೂಟ ಅನಗತ್ಯ- ಜೈಲು ಅಧಿಕಾರಿಗಳು; ಇವು ಇಂದಿನ ಪ್ರಮುಖ ಸುದ್ದಿಗಳು 08-08-2024

file pic
ಸಂಗ್ರಹ ಚಿತ್ರonline desk

1. ವಕ್ಫ್ (ತಿದ್ದುಪಡಿ) ಮಸೂದೆ, 2024 ಕ್ಕೆ ಸಿದ್ದರಾಮಯ್ಯ ತೀವ್ರ ವಿರೋಧ

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಮಂಡಿಸಿದ್ದು, 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಎನ್ ಡಿಎ ಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯ ಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.

2. ಮುಡಾ ನಿವೇಶನ ಸಿಎಂ ಗೆ ಮತ್ತೊಂದು ಸಂಕಷ್ಟ

ಮುಡಾದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಖಾಸಗಿ ದೂರು ದಾಖಲಾಗಿದೆ. ದೂರುದಾರರಾದ ಮೈಸೂರು ಮೂಲದ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು, ಈ ಹಗರಣದಲ್ಲಿ ಮುಖ್ಯಮಂತ್ರಿ ಶಾಮೀಲಾಗಿದ್ದಾರೆ. ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಖಾಸಗಿ ದೂರು ದಾಖಲಿಸಿದ್ದು, ಈ ಕುರಿತು ಸಿಬಿಐ ಅಥವಾ ಇತರ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ನಿರ್ದೇಶನ ನೀಡಿ ಎಂದು ನ್ಯಾಯಾಲಯಕ್ಕೆ ಕೋರಿದ್ದಾರೆ. ಇದೇ ಹಗರಣ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಎರಡು ದಿನಗಳ ಹಿಂದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೇಟ್ ಅವರಿಗೂ ದಾಖಲೆ ಸಮೇತ ದೂರು ನೀಡಿದ್ದರು.

3. ರಾಜ್ಯಕ್ಕೆ ಆಂಧ್ರ DCM ಪವನ್ ಕಲ್ಯಾಣ್ ಭೇಟಿ

ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ತೆಲುಗಿನ ಜನಪ್ರಿಯ ನಟ ಪವನ್ ಕಲ್ಯಾಣ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾದರು. ಆಂಧ್ರ ಪ್ರದೇಶ ಚುನಾವಣೆ ಗೆಲುವು ಮತ್ತು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್ ಅವರಿಗೆ ಸಿಎಂ ಶುಭಾಶಯ ತಿಳಿಸಿದರು. ಬಳಿಕ ವಿಧಾನಸೌಧದಲ್ಲಿ ನಡೆದ 'ಅಂತಾರಾಷ್ಟ್ರೀಯ ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತ ಸಭೆಯಲ್ಲಿ ಪಾಲ್ಗೊಂಡು 7 ಅಂಶಗಳ ಅಜೆಂಡಾ ಅಡಿ ಮಾತುಕತೆ ನಡೆಸಿದರು. ನಂತರ ವಿಧಾನಸೌಧದಲ್ಲಿ ಸಚಿವ ಈಶ್ವರ್‌ ಖಂಡ್ರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ಇಂದಿನ ಸಭೆಯಲ್ಲಿ ರಕ್ತಚಂದನ ರಕ್ಷಣೆ, ಪುಂಡಾನೆ ಸೆರೆಹಿಡಿಯೋದು, ಅರಣ್ಯ ರಕ್ಷಣೆ ಸೇರಿದಂತೆ ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು. ಕುಮ್ಕಿ ಆನೆಗಳು ಕಾಡು ಆನೆಗಳನ್ನು ಓಡಿಸಲು ಸಹಾಯ ಮಾಡುವುದರಿಂದ ಆಂಧ್ರ ಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ್ದೇವೆ ಎಂದರು. ಆನೆ ಹಾವಳಿ ತಪ್ಪಿಸಲು ಆಗಸ್ಟ್ 12 ರಂದು ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

4. ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ 

ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ. ಆಗಸ್ಟ್ 8 ರಿಂದ 19 ವರೆಗೆ ಈ ಪ್ರದರ್ಶನ ಇರಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ವಾಹನ ನಿಲುಗಡೆಗೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

5. ದರ್ಶನ್ ಗೆ ಮನೆಯೂಟ ಅಗತ್ಯವಿಲ್ಲ- ಹೈಕೋರ್ಟ್ ಗೆ ಜೈಲು ಅಧಿಕಾರಿಗಳ ವರದಿ

ಮನೆಯಿಂದ ಊಟ, ಹಾಸಿಗೆ ತರಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಮಾಡಿದ್ದ ಮನವಿಗೆ ಸಂಬಂಧಪಟ್ಟಂತೆ ಜೈಲು ಅಧಿಕಾರಿಗಳು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ನಟ ದರ್ಶನ್ ಗೆ ಮನೆ ಊಟಕ್ಕೆ ಅವಕಾಶ ನೀಡಬೇಡಿ, ಜೈಲೂಟ ತಿಂದು ಅವರಿಗೆ ಆರೋಗ್ಯ ಸಮಸ್ಯೆಯೇನೂ ಆಗಿಲ್ಲ, ಚೆನ್ನಾಗಿದ್ದಾರೆ, ಕಾನೂನಿನಲ್ಲಿ ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲ ಎಂಬುದಾಗಿ ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com