ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವುದೇ ಅಥವಾ ಹೊಸ ಫ್ಯಾಕ್ಟರಿ ಆರಂಭಿಸಬೇಕೇ ಎಂಬ ಬಗ್ಗೆ ಚರ್ಚೆ: DKS

ಐತಿಹಾಸಿಕ ಮೈಶುಗರ್ ಕಾರ್ಖಾನೆ ಹೇಗೆ ಉಳಿಸಿಕೊಳ್ಳಬೇಕು ಎಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ರೈತರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ.
ಕೆಆರ್ ಎಸ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಡಿಕೆ ಶಿವಕುಮಾರ್
ಕೆಆರ್ ಎಸ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಡಿಕೆ ಶಿವಕುಮಾರ್
Updated on

ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಮುಖ ಸಮಸ್ಯೆ, ಐತಿಹಾಸಿಕ ಮೈಶುಗರ್ ಕಾರ್ಖಾನೆ ಉಳಿವು, ಕೆಆರ್ ಎಸ್ ನ ಬೃಂದಾವನ ಉದ್ಯಾನವನ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ನಾಯಕರು ಹಾಗೂ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಬೃಂದಾವನ ಉದ್ಯಾನವನ ಅಭಿವೃದ್ಧಿ ಸಂಬಂಧ ಶಿವಕುಮಾರ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು. ನಂತರ ಕೆಆರ್ ಎಸ್ ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ವಿವಿಧ ಸಭೆಗಳ ಮಾಹಿತಿ ನೀಡಿದರು. ಮಂಡ್ಯ ಜಿಲ್ಲೆಯ ಸಮಸ್ಯೆ ಕುರಿತು ಇಲ್ಲಿನ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಐತಿಹಾಸಿಕ ಮೈಶುಗರ್ ಕಾರ್ಖಾನೆ ಹೇಗೆ ಉಳಿಸಿಕೊಳ್ಳಬೇಕು ಎಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ರೈತರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ. ಹೊಸ ಕಾರ್ಖಾನೆ ಆರಂಭಿಸಬೇಕಾ ಅಥವಾ ಇರುವ ಕಾರ್ಖಾನೆಗೆ ಹೊಸ ವ್ಯವಸ್ಥೆ ಕಲ್ಪಿಸುವುದೇ ಎಂದು ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

10 ಸಾವಿರ ಟಿಸಿಡಿ ಮಾಡುವುದು ನಮ್ಮ ಮುಂದೆ ಇರುವ ಆಯ್ಕೆ. ಇದನ್ನು ಮಾಡಿದರೆ ಬೇಕಾಗಿರುವ ಕಬ್ಬನ್ನು ಎಲ್ಲಿಂದ ತರುವುದು? ಬೆಳೆ ಪ್ರಮಾಣ ಎಷ್ಟಿದೆ? ಎಂದು ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಿರುವ 5 ಸಾವಿರ ಟಿಸಿಡಿ ಸಂಪೂರ್ಣವಾಗಿ ನಡೆದು ಅಲ್ಲಿ ಎಥೆನಾಲ್ ಘಟಕ ಸೇರಿದಂತೆ ಎಲ್ಲವೂ ಕಾರ್ಯಾರಂಭವಾಗಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ನಾವು ದೊಡ್ಡ ಕಾರ್ಖಾನೆ ಮಾಡುವುದು ದೊಡ್ಡದಲ್ಲ. ಅದಕ್ಕೆ ತಕ್ಕಂತೆ ರೈತರು ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು” ಎಂದು ತಿಳಿಸಿದರು.

ಕೆಆರ್ ಎಸ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಡಿಕೆ ಶಿವಕುಮಾರ್
ಎರಡು ವರ್ಷಗಳ ನಂತರ ಕೆಆರ್​ಎಸ್ ಡ್ಯಾಮ್​ ಭರ್ತಿ; ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

ನಮಗಿರುವ ವರದಿ ಪ್ರಕಾರ ಅಕಾಲಿಕ ಮಳೆಯಿಂದಾಗಿ ರೈತರು ಕಬ್ಬು ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. 2 ಸಾವಿರ ರೈತರು ಕಬ್ಬು ಬೆಳೆಗೆ ಮುಂದಾಗಿದ್ದಾರೆ. ಇದಕ್ಕೆ ಏನು ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಈ ಕಾರ್ಖಾನೆ ಜತೆಗೆ ಇನ್ನು ಐದಾರು ಕಾರ್ಖಾನೆಗಳಿವೆ. ಎಲ್ಲವೂ ಸುಸ್ಥಿರವಾಗಿರಬೇಕು ಎಂದರು. 5 ಸಾವಿರ ಟಿಸಿಡಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಬೇಕಾಗಿರುವ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಾಂತ್ರಿಕ ಸಮಿತಿ ತಿಳಿಸಿದೆ. ಹೀಗಾಗಿ ಈಗ ಇರುವ ಘಟಕ ಆರ್ಥಿಕವಾಗಿ ಗಟ್ಟಿಯಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ರೈತರಿಗೆ ಬೆಳೆಗೆ ತಕ್ಕ ಬೆಲೆ ಸಿಗುವಂತಾಗಬೇಕು. ರೈತರು ನಿರಂತರವಾಗಿ ಕಬ್ಬು ಬೆಳೆಯುವಂತೆ ಮಾಡಬೇಕು. ಮಧ್ಯೆ ಬರಗಾಲ ಬಂದು ಬೆಳೆ ನಿಲ್ಲುವಂತೆ ಆಗಬಾರದು” ತಿಳಿಸಿದರು.

ಈಗ ಇರುವ 200 ಎಕರೆ ಜಾಗದಲ್ಲಿ ಯೋಜನೆ ಆರಂಭಿಸುತ್ತೇವೆ. ಅಣೆಕಟ್ಟಿನ ರಕ್ಷಣೆಗೆ ಅಗತ್ಯವಿರುವ ಜಾಗವನ್ನು ಬಿಟ್ಟು ಇತರೆ ಜಾಗದಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಎರಡು ಮೂರು ಪಂಚಾಯ್ತಿ ಸೇರಿ ಇದಕ್ಕೆ ಯೋಜನಾ ಪ್ರದೇಶ ರೂಪಿಸುತ್ತೇವೆ. ಮುಂದೆ ಹತ್ತಾರು ಸಾವಿರ ಉದ್ಯೋಗ ಸೃಷ್ಟಿಯಾಗಿ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿಂದ ರಸ್ತೆ ಅಗಲೀಕರಣ ಸೇರಿದಂತೆ, ಈ ಭಾಗದ ಪ್ರವೇಶ ಹಾಗೂ ನಿರ್ಗಮನದಲ್ಲಿ ನಾಲ್ಕು ಪಥದ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಬೃಂದಾವನ ಹಾಗೂ ಪಕ್ಷಿಧಾಮ ಸೇರಿದಂತೆ ಪ್ರವಾಸೋದ್ಯಮ ಉತ್ತೇಜನ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಪರಂಪರೆ ಉಳಿಸಿಕೊಂಡು, ಹಳೆಯ ಮಾದರಿಯಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ನಾವು 2 ಸಾವಿರ ಕೋಟಿ ಅನುದಾನ ಇಟ್ಟುಕೊಂಡಿದ್ದು, ಇದನ್ನು ಮಾಡುವವರು ಯಾವ ರೀತಿ ಮಾಡಬೇಕು ಎಂದು ಕೆಲವು ಮಾರ್ಗಸೂಚಿಯನ್ನು ನಿಗದಿಪಡಿಸಿದ್ದೇವೆ ಎಂದರು.

ಈ ಯೋಜನೆಗೆ ಯಾರ ವಿರೋಧವಿಲ್ಲ. ಸರ್ಕಾರ ಎಲ್ಲರ ಸಲಹೆಯನ್ನು ಕೇಳುತ್ತದೆ. ನಮ್ಮ ಅಭಿಪ್ರಾಯವನ್ನು ಕೇಳಿ ಎಂದು ಹೇಳಿದ್ದಾರೆ. ಅಣೆಕಟ್ಟು ರಕ್ಷಣೆಯನ್ನು ಮಾಡುತ್ತೇವೆ. ಅಣೆಕಟ್ಟಿನ ಘನತೆ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು. ವಿರೋಧ ಪಕ್ಷದವರು ಏನಾದರೂ ಹೇಳಲಿ. ಅವರ ಛಾಯೆಯನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಅವರಿಗೆ ದುಡ್ಡು ಮಾಡುವ ರೂಢಿ ಇದೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com