ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವವರು ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಆದೇಶ ಕಾಯ್ದಿರಿಸಿ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ.
ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಆಗಸ್ಟ್ 13 ರಂದು ಆದೇಶ ಪ್ರಕಟಿಸುವ ಸಾಧ್ಯತೆ ಇದೆ. ದೂರುದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ಅವರು, ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಮಾಲೀಕರೇ ಅಲ್ಲದ ವ್ಯಕ್ತಿ ಪರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಈ ಜಮೀನಿನಲ್ಲಿ ದೇವನೂರು ಬಡಾವಣೆ ರಚನೆಯಾಗಿದೆ. 2004ರಲ್ಲಿ ಮುಖ್ಯಮಂತ್ರಿ ಪತ್ನಿಯ ಸಹೋದರ ದೇವರಾಜುನಿಂದ ಜಮೀನು ಖರೀದಿಸಲಾಗಿದೆ. ಆಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಖರೀದಿಗೆ ಹಣದ ಮೂಲದ ಬಗ್ಗೆ ಪ್ರಶ್ನೆಯಿದೆ. ದೇವನೂರು ಬಡಾವಣೆಯಲ್ಲಿ ಈಗಲೂ ಖಾಲಿ ನಿವೇಶನಗಳಿವೆ. ಆದರೆ ದುಬಾರಿ ಬೆಲೆಯ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ ಎಂದು ಹೇಳಿದರು.
2010 ರಲ್ಲಿ ಮುಖ್ಯಮಂತ್ರಿ ಪತ್ನಿ ಸಹೋದರನಿಂದ ದಾನಪತ್ರ ಪಡೆದರು. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಸುಮ್ಮನಿದ್ದರು. 2014 ರಲ್ಲಿ ಮುಖ್ಯಮಂತ್ರಿ ಆದಾಗ ಪರಿಹಾರದ ನಿವೇಶನ ಕೇಳಿದರು. ಮಾರಾಟ ಮಾಡಿದ ದೇವರಾಜು ಜಮೀನು ಮಾಲೀಕರಲ್ಲ. ಅವರಿಂದ ಖರೀದಿಸಿದ ಮಲ್ಲಿಕಾರ್ಜುನ ಸ್ವಾಮಿ ಮಾಲೀಕರಾಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಪತ್ನಿ ಪಾರ್ವತಿ ಬಿ.ಎಂ ಕೂಡಾ ಮಾಲೀಕರಾಗುವುದಿಲ್ಲ, ಆದರೂ ಜಮೀನಿಗೆ ಬದಲಿ ನಿವೇಶನ ಕೇಳುತ್ತಾರೆ ಎಂದು ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದ್ದಾರೆ.
ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. ಹಕ್ಕಿದ್ದಿದ್ದರೂ ಗರಿಷ್ಠ 4800 ಚದರಡಿ ಜಾಗ ಮಾತ್ರ ಪಡೆಯಬಹುದಿತ್ತು. ಆದರೆ 14 ಸೈಟ್ ಪಡೆದಿರುವುದು ಕಾನೂನುಬಾಹಿರ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಸ್ವಾಧೀನವಾದ ಜಮೀನಿನಲ್ಲಿ ಮಾತ್ರ 4800 ಅಡಿ ನಿವೇಶನ ಪಡೆಯಬಹುದು. ಆದರೆ ದುಬಾರಿ ಮೌಲ್ಯದ ಬಡಾವಣೆಯಲ್ಲಿ 14 ಸೈಟ್ ಹಂಚಲಾಗಿದೆ ಎಂದಿದ್ದಾರೆ.
Advertisement