ಕೊಪ್ಪಳ: ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಅಂಗನವಾಡಿ ಮಕ್ಕಳಿಗೆ ನಿತ್ಯ ಉಪಾಹಾರದೊಂದಿಗೆ ಮೊಟ್ಟೆಯನ್ನು ನೀಡುತ್ತಿದೆ. ಆದರೆ ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ವಂಚನೆ ಎಸಗಿರುವ ಆರೋಪ ಕೊಪ್ಪಳ ಜಿಲ್ಲೆಯಲ್ಲಿ ಕೇಳಿಬಂದಿದೆ.
ಅಂಗನವಾಡಿ ಶಿಕ್ಷಕಿ, ಸಹಾಯಕಿಯರು ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದ ವಿಡಿಯೊ ವೈರಲ್ ಆಗಿದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದ್ದಾರೆ. ಇಡೀ ಪ್ರಕರಣದ ವರದಿ ನೀಡುವಂತ ಆದೇಶಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದರು. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ, ಮಕ್ಕಳು ಬಾಯಿಗಿಡುವ ಮುನ್ನವೇ ಮೊಟ್ಟೆ ಕಸಿದುಕೊಂಡಿದ್ದಾರೆ. ಈ ಅಮಾನವೀಯ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ.
ನಿನ್ನೆ ಶುಕ್ರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ತಂಡವು ಸಹ ಇಲ್ಲಿಯ ಗೋಲ್ಮಾಲ್ ಬಗ್ಗೆ ಹೇಳಿದ್ದರು. 50 ಅಂಗನವಾಡಿಗಳ ಪರಿಶೀಲಿಸಿದ ನಂತರ ಇಲ್ಲಿಯ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಮೊಟ್ಟೆ ಕದಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಕ್ಕಳು ತಿನ್ನಲು ಮುಂದಾದ ಮೊಟ್ಟೆ ಕಸಿದುಕೊಂಡಿದ್ದಾರೆ. ವಿಡಿಯೊ ನೋಡಿದರೆ ಕರುಳು ಚುರ್ ಎನ್ನುತ್ತದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಅಮಾನತುಗೊಳಿಸಲಾಗಿದೆ. ಇಬ್ಬರನ್ನೂ ಶಾಶ್ವತವಾಗಿ ಡಿಸ್ ಮಿಸ್ ಮಾಡಲು ಸೂಚಿಸಿದ್ದೇನೆ. ಜತೆಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement