ಬದುಕಿನಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಚಡ್ಡಿಯೆಲ್ಲ ಕಪ್ಪು-HDK; ಸಕಲೇಶಪುರ: ರೈಲು ಹಳಿ ಮೇಲೆ ಗುಡ್ಡ ಕುಸಿತ; ಮೊಟ್ಟೆ ಕಸಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಅಮಾನತು; ಇವು ಇಂದಿನ ಪ್ರಮುಖ ಸುದ್ದಿಗಳು 10-08-2024

file pic
ಸಾಂಕೇತಿಕ ಚಿತ್ರonline desk

1. ಸೈಟ್ ವಾಪಸ್ ಕೊಟ್ಟರೆ ಕಾನೂನು ಬಾಹಿರ ಚಟುವಟಿಕೆ ಮುಚ್ಚಿಹಾಕಲು ಸಾಧ್ಯವೇ? ಮೈಸೂರು ಚಲೋ ಪಾದಯಾತ್ರೆ ಸಮಾರೋಪದಲ್ಲಿ HDK

ಮುಡಾ ನಿವೇಶನ ಪ್ರಕರಣಕ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭ ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಿತು. ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಮಿತ್ರಪಕ್ಷಗಳು ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ನಿಲ್ಲದು ಎಂದು ಘೋಷಿಸಿದ್ದು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಮೈತ್ರಿ ನಾಯಕರು ಸಮಾವೇಶದಲ್ಲಿ ಹೇಳಿದ್ದಾರೆ. ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನನ್ನ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯನವರು ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಕಾನೂನು ಬಾಹಿರವಾಗಿ ಸೈಟ್ ಪಡೆದ ಬಗ್ಗೆ ನಾವು ಪ್ರಶ್ನೆ ಮಾಡ್ತಿದ್ದೇವೆ. ಕಾನೂನು ಬದ್ಧವಾಗಿ ಭೂಮಿ ಕೊಟ್ಟಿದ್ದರೆ ಪ್ರಶ್ನೆ ಮಾಡ್ತಿರಲಿಲ್ಲ. ಸಿದ್ದರಾಮಯ್ಯಗೆ ಕೊಟ್ಟಿರುವುದು ಸರ್ಕಾರದ ಭೂಮಿ. ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ಈಗಲೂ ನಾನು 14 ಸೈಟ್ ವಾಪಸ್ ಕೊಡಲು ಸಿದ್ಧ ಎಂದಿದ್ದಾರಂತೆ. ಸೈಟ್ ವಾಪಸ್ ಕೊಟ್ಟರೆ ಕಾನೂನುಬಾಹಿರ ಚಟುವಟಿಕೆ ಮುಚ್ಚಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನನ್ನ ಬದುಕಿನ ಕೊನೆಯ ಉಸಿರು ಇರುವವರೆಗು ರಾಜಕೀಯದಲ್ಲಿದ್ದು, ನಿಮ್ಮನ್ನು ಮನೆಗೆ ಕಳಿಸುವ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರ್ ವಿರುದ್ಧವೂ ಟೀಕೆ ಮಾಡಿರುವ ಯಡಿಯೂರಪ್ಪ, ಡಿಕೆಶಿವಕುಮಾರ್ ತಾನು ಕಲ್ಲುಬಂಡೆ ಎನ್ನುತ್ತಾರೆ, ವಿಜಯೇಂದ್ರ, ಅಶೋಕ್ ಅವರನ್ನು ಏಕವಚನದಲ್ಲಿ ಕರೆದಿದ್ದಾರೆ, ಡಿಸಿಎಂ ಪಾಪದ ಕೊಡ ತುಂಬಿದೆ, ಯಾವಾಗ ಏನು ಆಗುತ್ತದೋ ಗೊತ್ತಿಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಸರ್ಕಾರ ತರಲು ಜನ ಕಾರಣಕರ್ತರಾಗಬೇಕಿದೆ ಎಂದು ಕರೆ ನೀಡಿದ್ದಾರೆ.

2. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಸಮನ್ಸ್ 

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ನೀಡಿದೆ. ವಕೀಲ ಕೆ.ದಿಲೀಪ್ ಕುಮಾರ್ ಸತೀಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದರು. ಆಗಸ್ಟ್ 27ಕ್ಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸೂಚಿಸಿರುವ ನ್ಯಾ.ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ, ಸಮನ್ಸ್ ಜಾರಿ ಮಾಡಿದೆ. 2022ರ ನವೆಂಬರ್‌ನಲ್ಲಿ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಾರಕಿಹೊಳಿ, ‘ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ’ ಎಂದಿದ್ದರು.

3. ಮೊಟ್ಟೆ ಕಸಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಅಮಾನತು

ಅಂಗನವಾಡಿ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಕಸಿದ ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿ, ಸಹಾಯಕಿಯ ಕೃತ್ಯದ ವಿಡಿಯೊ ವೈರಲ್‌ ಆಗಿದ್ದು, ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣವೇ ಅಮಾನತು ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾ ಬೇಗಂ ಅಮಾನತುಗೊಂಡಿದ್ದಾರೆ.

4. ಸಕಲೇಶಪುರ: ರೈಲು ಹಳಿಗಳ ಮೇಲೆ ಗುಡ್ಡ ಕುಸಿತ

ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದ್ದು, ಶುಕ್ರವಾರ ರಾತ್ರಿ ಹೊರಟಿದ್ದ ಎರಡು ರೈಲುಗಳು ಹಾಸನ ಹಾಗೂ ಆಲೂರು ನಿಲ್ದಾಣದಲ್ಲಿ ಸ್ಥಗಿತವಾಗಿದೆ. ವೀಕೆಂಡ್‌ನಲ್ಲಿ ಊರಿಗೆ ಹೊರಟಿದ್ದ ಪ್ರಯಾಣಿಕರಿಗೆ ಭೂಕುಸಿತದಿಂದ ಅನಾನುಕೂಲ ಉಂಟಾಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದು, ರೈಲ್ವೆ ವಲಯ ಪಡೀಲ್-ಹಾಸನ ಜಂಕ್ಷನ್‌ ನಡುವಿನ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ. ಈ ನಡುವೆ ಭೂಕುಸಿತವಾದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದಿದ್ದು ಕೆಲವೇ ಹೊತ್ತಿನಲ್ಲಿ ರೈಲಿನ ಓಡಾಟ ಆರಂಭಗೊಳಿಸಲಾಗುವುದು ಎಂದು ಡಿಆರ್‌ಎಂ ಮೈಸೂರು ಖಾತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ.

5. ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ ಬಾಕಿ ಹಣನೀಡಲು ಕೇಂದ್ರ ಸಚಿವರಿಗೆ ಸಂಸದ ಡಾ. ಮಂಜುನಾಥ್ ಮನವಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ 45 ದಿನಗಳಲ್ಲಿ 1,769 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ಸಂಬಂಧ ನಿನ್ನೆ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಬಾಕಿ ಉಳಿದ 1769 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com