ತುಂಗಭದ್ರಾ ಜಲಾಶಯದಲ್ಲಿನ ನೀರಿನ ಒತ್ತಡಕ್ಕೆ ಡ್ಯಾಂ ನ ಗೇಟ್ ಸಂಖ್ಯೆ 19ರ ಚೈನ್ ಲಿಂಕ್ ತುಂಡಾಗಿ ಗೇಟ್ ಕೊಚ್ಚಿಹೋಗಿದೆ. ಪರಿಣಾಮ ಡ್ಯಾಂನಿಂದ ನೀರು ರಭಸವಾಗಿ ನುಗ್ಗುತ್ತಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಬಾರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಕೊಚ್ಚಿ ಹೋಗಿರುವ ಗೇಟ್ ದುರಸ್ತಿ ಮಾಡಬೇಕಾದರೆ, ನೀರು 20 ಅಡಿಯಷ್ಟು ಇಳಿಕೆಯಾಗಬೇಕಾಗುತ್ತದೆ. ಪರಿಣಾಮ 105 ಅಡಿ ಟಿಎಂಸಿ ನೀರಿನ ಸಾಮರ್ಥ್ಯವಿರುವ ಡ್ಯಾಂ ನಲ್ಲಿ 65 ಟಿಎಂಸಿ ಖಾಲಿಯಾಗಲಿದ್ದು, ರೈತರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ಕಂಪ್ಲಿ ಪಟ್ಟಣ ಜಲಾವೃತಗೊಳುವ ಆತಂಕವೂ ಎದುರಾಗಿದೆ. ಕ್ರಸ್ಟ್ ಗೇಟ್ ತುಂಡಾಗಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಜಲಾಶಯದ ಆಸುಪಾಸಿನಲ್ಲಿ ಯಾರೂ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಡ್ಯಾಂ ಗೇಟ್ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿಎಂ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವರು, ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ.ರೈತರಿಗೆ ಒಂದು ಬೆಳೆಗೆ ನೀರು ಉಳಿಸಿ, ಗೇಟ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಡ್ಯಾಂ ವಿಷಯವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರವನ್ನು ಟೀಕಿಸಿದ್ದು, ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಕಾಲಕಾಲಕ್ಕೆ ಜಲಾಶಯದ ನಿರ್ವಹಣೆ ಬಗ್ಗೆ ಗಮನ ಹರಿಸಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಆದರೆ ಭ್ರಷ್ಟಾಚಾರ, ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಸಿಎಂ, ಡಿಸಿಎಂ ವ್ಯಸ್ತರಾಗಿರುವಾಗ ಇಲಾಖೆಯ ಕರ್ತವ್ಯ ನಿರ್ವಹಿಸಲು ಪಾಪ ಸಮಯ ಎಲ್ಲಿದೆ? ಎಂದು ವ್ಯಂಗ್ಯವಾಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಭೂಕಂಪನವಾದ ಅನುಭವವಾಗಿದ್ದು, ಜನತೆ ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಬೀದರ್ ಭೂಕಂಪ ರಹಿತ ವಲಯದಲ್ಲಿದ್ದು, ಈ ಪ್ರದೇಶದಲ್ಲಿ ಮೊದಲ ಬಾರಿಗೆ 2.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಹುಮನಾಬಾದ್ ತಾಲೂಕಿನ ಸೀತಾಳಗೇರಾ ಜಿಪಿಯಿಂದ ನೈಋತ್ಯಕ್ಕೆ 3.5 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ.
ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ, ದೂರುದಾರ ಟಿಜೆ ಅಬ್ರಹಾಂ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ. ಸಿಎಂ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದು ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ ಎಂದು ರಾಜ್ಯಪಾಲರು ತಿಳಿಸಿದ್ದರಾದರೂ ಈ ವರೆಗೂ ಅನುಮತಿ ನೀಡಿಲ್ಲ ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಅಥವಾ ಹೈಕೋರ್ಟ್‌ನಲ್ಲಿ ವಿಶೇಷ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದೇನೆಂದು ಅಬ್ರಾಹಂ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ಪ್ರತಿಭಟನಾಕಾರರು ಹಿಂದೂಗಳನ್ನು ಟಾರ್ಗೆಟ್ ಮಾಡಿ ಹಿಂಸಾಚಾರ ನಡೆಸುತ್ತಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಹಿಂದೂ ಜಾಗೃತ ಸಂಘಟನೆ ಹಾಗೂ ಆರ್ಎಸ್ಎಸ್ ನ ಸಹಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಿಂದೂಗಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜೈಪುರದಿಂದ ರೈಲಿನಲ್ಲಿ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದ್ದ ಮಾಂಸದ ಮಾದರಿಯ ಕುರಿತು ಹೈದರಾಬಾದ್ ಲ್ಯಾಬ್ ವರದಿ ಬಹಿರಂಗವಾಗಿದ್ದು, ಬಾಕ್ಸ್‌ನಲ್ಲಿದ್ದಿದ್ದು ಕುರಿ ಮಾಂಸವೇ ಎಂಬುದು ಸ್ಪಷ್ಟವಾಗಿದೆ. ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್ ರಜಾಕ್ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಹೈದರಾಬಾದ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಲ್ಯಾಬ್ ವರದಿ ಬಂದಿದ್ದು, ಅದು ಕುರಿ ಮಾಂಸವೇ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್‌ಗಳು ಪತ್ತೆಯಾಗಿದ್ದವು.
Advertisement